ದೊಡ್ಡಬಳ್ಳಾಪುರ(ಬೆಂಗಳೂರು):ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ಹೊರತೆಗೆಯುವಲ್ಲಿ ದೊಡ್ಡಬಳ್ಳಾಪುರದ ತಾಯಿ-ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. 35 ವರ್ಷದ ಮಹಿಳೆಯ ಗರ್ಭಕೋಶದ ಸುತ್ತ 4.5 ಕೆ.ಜಿ ಗಡ್ಡೆ ಬೆಳೆದಿತ್ತು.
ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಎಂಬವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವು, ಸುಸ್ತು ಎಂದು ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 4ರಿಂದ 5 ಕೆ.ಜಿ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪ್ರಸೂತಿ ತಜ್ಞರಾದ ಡಾ.ಅರ್ಚನಾ ಕೆ.ಎಲ್.ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ಡಾ.ಅರ್ಚನಾ ಕೆ.ಎಲ್. ಮಾತನಾಡಿ, "ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಮಂದಿಯಲ್ಲಿ ಬಹಳ ಸಣ್ಣದಾಗಿ ಕಂಡುಬರುತ್ತದೆ. ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯ ಹೊಟ್ಟೆಯಲ್ಲಿ 4ರಿಂದ 5 ಕೆ.ಜಿ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ಬಂದಿದ್ದರೆ ಜೀವಕ್ಕೆ ಹಾನಿಯಾಗುತ್ತಿತ್ತು. ಸದ್ಯ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆ ಹೊರತೆಗೆಯಲಾಗಿದೆ. ಮಹಿಳೆ ಆರೋಗ್ಯವಾಗಿದ್ದಾರೆ. ಇದೊಂದು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದ್ದು, ಮಹಿಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ" ಎಂದರು.