ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕೆ ಜಾರಿಗೆ ತಂದ ತ್ವರಿತ ಬಸ್ ಸೇವೆ (BRTS) ಮಹತ್ವಾಕಾಂಕ್ಷಿ ಯೋಜನೆ ಆರಂಭದಿಂದ ಇಲ್ಲಿಯವರೆಗೂ ಟೀಕೆಗಳನ್ನು ಎದುರಿಸುತ್ತಲೇ ಸಾಗುತ್ತಿದೆ. ಅದರ ಜೊತೆಗೆ ಬಿಆರ್ಟಿಎಸ್ ಯೋಜನೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬಿಳಿ ಆನೆಯಂತಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಲಾಭದ ಹಳಿಗೆ ಬರದೇ ಯೋಜನೆ ನಷ್ಟದಲ್ಲಿಯೇ ಪಯಣ ಮುಂದುವರೆಸಿದ್ದು, ಸಂಸ್ಥೆಗೆ ನುಂಗಲಾರದ ತುತ್ತಾಗಿದೆ.
ರಾಜ್ಯದ ಏಕೈಕ ತ್ವರಿತ ಬಸ್ ಸಾರಿಗೆ ಸೇವೆ ಆರಂಭದಲ್ಲಿ ಮಹಾನಗರದ ಜನತೆಯಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿತ್ತು. ಆದರೆ ಯೋಜನೆಯಲ್ಲಿನ ಅನಗತ್ಯ ಮಾರ್ಪಾಡು ಅನುಷ್ಠಾನದಲ್ಲಾದ ವಿಳಂಬದಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಯೋಜನೆಗೆ ಶಾಪ ಹಾಕದವರೇ ಕಡಿಮೆ. ಒಂದಿಷ್ಟು ಕಾಮಗಾರಿಗಳು ಬಾಕಿಯಿದ್ದರೂ 2018 ಅಕ್ಟೋಬರ್ ತಿಂಗಳಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಮೂಲ ಯೋಜನೆ ಪ್ರಕಾರ, ಬಿಆರ್ಟಿಎಸ್ ಸೇವೆಯಿಂದ ಉಂಟಾಗುವ ನಷ್ಟವನ್ನು ನಗರಾಭಿವೃದ್ಧಿ ಇಲಾಖೆ ಭರಿಸುವುದಾಗಿತ್ತು. ಆದರೆ ಕಾರ್ಯಾಚರಣೆ ಕುರಿತು ಅಂದು ಲಿಖಿತ ಒಪ್ಪಂದ ಮಾಡಿಕೊಳ್ಳದಿರುವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.
159 ಕೋಟಿ ರೂ. ಬಾಕಿ:ಸಾಮಾನ್ಯವಾಗಿ ನಗರ ಸಾರಿಗೆಯಲ್ಲಿ ಶೇ.10ರಷ್ಟ ಸಾಮಾನ್ಯ. ಆದರೆ ಬಿಆರ್‌ಟಿಎಸ್‌ಗೆ ಪ್ರತೀ ಕಿ.ಮೀ.ಗೆ 30 ರೂ. ನಷ್ಟವಾಗುತ್ತಿದೆ. ಚಿಗರಿಯ 95-100 ಬಸ್‌ಗಳು ನಿತ್ಯ ಸರಾಸರಿ 30,000 ಕಿ.ಮೀ. ಸಂಚರಿಸುತ್ತಿವೆ. ಹೀಗಾಗಿ ತಿಂಗಳಿಗೆ 3 ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸುತ್ತಿದೆ. 2018ರಿಂದ ಇಲ್ಲಿಯವರೆಗೆ 159.72 ಕೋಟಿ ರೂ. ನಷ್ಟ ಉಂಟಾಗಿದೆ. 2018ರಿಂದ ಈ ನಷ್ಟ ಭರಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.