ಬೆಂಗಳೂರು :ಕೆಪಿಸಿಸಿ ಸಿಬ್ಬಂದಿಗೆ ಸಂಬಳ ಕೊಡಲು ಮತ್ತು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನೀಡಲು ಹಣ ಇಲ್ಲದಂತಾಗಿದೆ. ಹೀಗಾಗಿ ಶಾಸಕರಿಗೆ ತಲಾ 25 ಸಾವಿರ ರೂ. ನೀಡುವಂತೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಖಾತೆ ಜಪ್ತಿ ವಿಚಾರವಾಗಿ ಪ್ರತಿಕ್ರಿಯಿಸಿ, ಯೂತ್ ಕಾಂಗ್ರೆಸ್ ಚುನಾವಣಾ ಸಂದರ್ಭದ ಸದಸ್ಯತ್ವಕ್ಕಾಗಿ 90 ಕೋಟಿ ಸಂಗ್ರಹಿಸಿದೆ. ಈ ಹಣವನ್ನು ಎಐಸಿಸಿ ಖಾತೆಗೆ ಜಮೆ ಮಾಡಿದ್ದೇವೆ. ಇನ್ನು ನಾವು ವಿಧಾನಸಭೆ ಚುನಾವಣೆ ವೇಳೆ, ಅಭ್ಯರ್ಥಿಗಳಿಂದ 2 ಲಕ್ಷ ರೂ. ಕಲೆಕ್ಟ್ ಮಾಡಿದ್ದೇವೆ. ಇದರಿಂದ 21-22 ಕೋಟಿ ರೂ. ಸಂಗ್ರಹವಾಗಿದೆ. ಈಗ ಲೋಕಸಭೆ ಚುನಾವಣೆಗೆ ಹಣ ಸಂಗ್ರಹ ಮಾಡಬೇಕು ಅಂದುಕೊಂಡಿದ್ದೆ. ಆದರೆ, ಎಐಸಿಸಿ ಬೇಡ ಅಂದಿದೆ. ಈಗ ಕೆಪಿಸಿಸಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲ. ತಲಾ 25 ಸಾವಿರ ರೂ.ನಂತೆ ಎಲ್ಲಾ ಕಾಂಗ್ರೆಸ್ ಶಾಸಕರುಗಳು ಹಣ ಕೊಡುವಂತೆ ಹೇಳಿದ್ದೇನೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಎಐಸಿಸಿ ಖಾತೆ ಜಪ್ತಿ ಮಾಡಿದೆ ಎಂದರು.
ಎಐಸಿಸಿ ಹಣ ಸೀಜ್ ಮಾಡಿಸಿದ್ದಾರೆ. ಕೋರ್ಟ್ಗೆ ಹೋದರೆ ಅಲ್ಲೂ ನ್ಯಾಯ ಸಿಕ್ಕಿಲ್ಲ. ನಾವೇನು ಬ್ಯುಸಿನೆಸ್ ಮಾಡುತ್ತಿದ್ದೇವಾ?. ನಮಗೆ ಯಾವುದೇ ಹೆಚ್ಚು ಬಾಂಡ್ ಕೊಟ್ಟಿಲ್ಲ. ಕಾಂಗ್ರೆಸ್ಗೆ ಶೇ 11ರಷ್ಟು ಮಾತ್ರ ಬಾಂಡ್ ನಿಂದ ಹಣ ಬಂದಿದೆ. ಬಿಜೆಪಿಗೆ ಶೇ 52ರಷ್ಟು ಹಣ ಸಂಗ್ರಹವಾಗಿದೆ. ನಮ್ಮ ಹಣ ಸೀಜ್ ಮಾಡಿದ್ರೆ ಹೇಗೆ?. ನಾವು ಪ್ರಚಾರಕ್ಕೆ ಹಣ ಕೊಡೋದು ಎಲ್ಲಿಂದ?. ನಾವು ಎಲೆಕ್ಷನ್ ಮಾಡೋದು ಎಲ್ಲಿಂದ?. ಖರ್ಚು ವೆಚ್ಚವನ್ನು ನಾವು ಎಲ್ಲಿಂದ ಭರಿಸೋದು. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಂದರ್ಭದಲ್ಲಿ ಇಂಡಿಯಾ ಶೈನಿಂಗ್ ಅಂತ ಪ್ರಚಾರ ಮಾಡಿದ್ದರು. ಈಗ ಸೋಲಿನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ರಾಜ್ಯಪಾಲರು ರಾಜೀನಾಮೆ ಕೊಡಿಸೋದು. ಅವರನ್ನು ಎಲೆಕ್ಷನ್‌ಗೆ ನಿಲ್ಲಿಸೋದು ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.