ಕರ್ನಾಟಕ

karnataka

ETV Bharat / state

25 ಸಾವಿರ ಪೆನ್​ಡ್ರೈವ್​ ಹಂಚಿಕೆ ಆರೋಪ ಮಾಡಿದ ಕುಮಾರಸ್ವಾಮಿ; ಸಿಬಿಐ ತನಿಖೆಗೆ ಆಗ್ರಹ - HDK Press Meet - HDK PRESS MEET

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ತುರ್ತು ಮಾಧ್ಯಮಗೋಷ್ಟಿ ಕರೆದಿದ್ದ ಹೆಚ್​ಡಿಕೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

DK SHIVAKUMAR  CABINET  BENGALURU  HD KUMARASWAMY
ಹೆಚ್​ಡಿಕೆ ಆಗ್ರಹ (ETV Bharat)

By ETV Bharat Karnataka Team

Published : May 7, 2024, 1:30 PM IST

Updated : May 7, 2024, 5:06 PM IST

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ (ETV Bharat)

ಬೆಂಗಳೂರು :ಪೆನ್ ಡ್ರೈವ್ ಕುರಿತು ತನಿಖೆ ಮಾಡುತ್ತಿರುವುದು ವಿಶೇಷ ತನಿಖಾ ದಳ (ಎಸ್ ಐಟಿ) ಅಲ್ಲ.. ಒಂದು ಸಿಎಂ ಸಿದ್ದರಾಮಯ್ಯ ಅವರ ಇನ್ವೆಸ್ಟಿಗೇಷನ್ ಟೀಂ, ಮತ್ತೊಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಇನ್ವೆಸ್ಟಿಗೇಷನ್ ಟೀಂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಪೆನ್ ಡ್ರೈವ್ ಪ್ರಕರಣವನ್ನು ಎಸ್​ಐಟಿ ಅಧಿಕಾರಿಗಳು ದಾಖಲಿಸಿಕೊಂಡು ಹಲವು ದಿನಗಳೇ ಕಳೆದಿದೆ. ಆದರೆ, ಇದುವರೆಗೂ ಪೆನ್​ಡ್ರೈವ್ ಹಂಚಿಕೆ ಮಾಡಿದವರನ್ನು ಬಂಧಿಸಿಲ್ಲ. ವಿಡಿಯೋ ಹಂಚಿರುವ ಕೆಲವರು ಹಾಸನ ಕೋರ್ಟ್​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎಸ್​ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಹೆಚ್. ಡಿ. ರೇವಣ್ಣ ಮೇಲೆ ಯಾರು ನೇರವಾಗಿ ದೂರು ಕೊಟ್ಟಿಲ್ಲ. ನಂತರ ಅಪಹರಣವೆಂದು ಸೃಷ್ಟಿ ಮಾಡಿದ್ರು. ಅಪಹರಣವಾದ ಹೆಣ್ಣು ಮಗಳನ್ನು ಎಲ್ಲಿಂದ ಕರೆದುಕೊಂಡು ಬಂದರು. ತೋಟದ ಮನೆ ಅಂತಾರೆ, ತೋಟದ ಮನೆ ಮಹಜರ್ ಮಾಡಿದ್ರಾ?. ಆಕೆ ಹೇಳಿಕೆ ಕೊಡಲಿಲ್ಲವೇ?, ನ್ಯಾಯಾಧೀಶರ ಮುಂದೆ ಆ ಹೆಣ್ಣುಮಗಳನ್ನು ಯಾಕೆ ಹಾಜರುಪಡಿಸಿಲ್ಲ. ಯಾರನ್ನು ಕರೆದುಕೊಂಡು ಒತ್ತಡ ಹಾಕಿಸಿದ್ದೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಯಾರನ್ನೂ ರಕ್ಷಣೆ ಮಾಡಲ್ಲ: ನಾನು ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ. ಪ್ರಜ್ಬಲ್ ಪರವೂ ಮಾತನಾಡುತ್ತಿಲ್ಲ. ತನಿಖೆ ಸರಿಯಾಗಿ ನಡೆದು ಸತ್ಯಾಸತ್ಯತೆ ಹೊರಬರಲಿ. ಪೆನ್‌ಡ್ರೈವ್ ಸೂತ್ರಧಾರಿ ಕಾರ್ತಿಕ್‌ಗೌಡನನ್ನು ಬಂಧಿಸದೇ ಇರುವುದು ಸರಿಯಲ್ಲ. ಚಿತ್ರೀಕರಣ ಮಾಡಿದ ವ್ಯಕ್ತಿ ಪೆನ್‌ಡ್ರೈವ್ ಮಾಡಿದವರ ಮೇಲೂ ಕ್ರಮ ಜರುಗಿಸಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ ಬರೆಯುತ್ತಾರೆ. ಈ ಪತ್ರದಲ್ಲಿ ಪ್ರಜ್ವಲ್‌ ರೇವಣ್ಣ, ಹೆಚ್‌ಡಿ ರೇವಣ್ಣ ಹೆಸರು ಇರಲ್ಲ. ಆದರೂ ಇಬ್ಬರ ವಿರುದ್ಧ ತನಿಖೆ ಮಾಡಲು ಸಿಎಂ ಸಿದ್ದರಾಮಯ್ಯ ಎಸ್‌ಐಟಿ ರಚನೆ ಮಾಡಿದ್ದರಾ?. ಬೆಂಗಳೂರಲ್ಲಿ ಕುಳಿತುಕೊಂಡು ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ದೂರನ್ನು ಹೊಳೆನರಸೀಪುರ ಪೊಲೀಸ್ ಠಾಣೆಗೆ ಕಳುಹಿಸುತ್ತಾರೆ ಎನ್ನುವ ಮೂಲಕ ಎಸ್​ಐಟಿ ತನಿಖೆ ಬಗ್ಗೆಯೇ ಅನುಮಾನವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ (ETV Bharat)

ಸರ್ಕಾರಕ್ಕೆ ಹೆಣ್ಣು ಮಕ್ಕಳ ರಕ್ಷಣೆ ಬೇಕಾಗಿಲ್ಲ. ಪ್ರತಿನಿತ್ಯ ಇವರು ಮಾತನಾಡಿದ್ದಾರೆ. ಇವರು ಮಾತನಾಡಿರುವ ಕಾಲ್ ರೆಕಾರ್ಡ್ ಎಲ್ಲ ಹೊರ ಬರಬೇಕು. ತನಿಖೆಗೆ ನಾನು ಅಡಚಣೆ ಮಾಡಲ್ಲ. ಯಾರನ್ನೂ ವಹಿಸಿಕೊಳ್ಳಲ್ಲ, ಯಾರೇ ತಪ್ಪು ಮಾಡಿರಲಿ, ಅವರಿಗೆ ಶಿಕ್ಷೆಯಾಗಲಿ. ಯಾರ ರಕ್ಷಣೆಯನ್ನೂ ನಾನು ಮಾಡುತ್ತಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ತನಿಖಾ ತಂಡದ ಮಾಹಿತಿಗಳನ್ನು ಸೋರಿಕೆ ಮಾಡಿರುವವರು ಯಾರು?, ಮಾಹಿತಿ ಸೋರಿಕೆಯಾಗಬಾರದು. ಸರ್ಕಾರಕ್ಕೆ ಬೇಕಿರುವುದು ಹೆಣ್ಣು ಮಕ್ಕಳ ರಕ್ಷಣೆಯಲ್ಲ. ಯಾರನ್ನೋ ತೇಜೋವಧೆ ಮಾಡುವುದು ಅಷ್ಟೇ ಎಂದು ಹೆಚ್​ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ರೇವಣ್ಣ ಮೇಲೆ ಯಾರು ನೇರವಾಗಿ ದೂರು ಕೊಟ್ಟಿಲ್ಲ. ಅದರೂ ಅಪಹರಣ ಸೃಷ್ಟಿ ಮಾಡಿ ಅವರನ್ನು ಬಂಧಿಸಲಾಗಿದೆ. ಇದುವರೆಗೂ ಅಪಹರಣವಾದ ಮಹಿಳೆಯನ್ನು ನ್ಯಾಯಾಧೀಶರ ಮುಂದೆ ಯಾಕೆ ಹಾಜರುಪಡಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಲೋಕಸಭಾ ಚುನಾವಣೆಯ ಎರಡು ದಿನ ಮುಂಚಿತವಾಗಿ 25 ಸಾವಿರ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಲಾಗಿದೆ. ಪೆನ್‌ಡ್ರೈವ್ ಹಂಚಿಕೆ ಮಾಡುವುದಕ್ಕೆ ಪೊಲೀಸರು ಸಹಕಾರ ನೀಡಿದ್ದಾರೆ. ಹಾಸನದಲ್ಲಿ ಮಾತ್ರವಲ್ಲ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರದಲ್ಲೂ ಪೆನ್‌ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ಹೆಚ್​ಡಿಕೆ ಆರೋಪಿಸಿದರು.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಬಗ್ಗೆ ನವೀನ್‌ಗೌಡ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಾರೆ. ಇವರ ವಿರುದ್ಧ ಪ್ರಜ್ವಲ್ ರೇವಣ್ಣ ಅವರ ಏಜೆಂಟ್ ದೂರು ಕೊಡುತ್ತಾರೆ. ದೂರು ಕೊಟ್ಟರೂ ಇವರ್‍ಯಾರನ್ನೂ ಬಂಧಿಸಿಲ್ಲ. ಪೆನ್‌ಡ್ರೈವ್ ಹಂಚಿದವರಿಗೆ ಕೋಟಿ ಕೋಟಿ ಹಣ ನೀಡಲಾಗಿದೆ. ಕಾರ್ತಿಕ್ ಗೌಡ ಏ.30 ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ. ಈ ಪೆನ್​ಡ್ರೈವ್ ಸೂತ್ರಧಾರಿಯೇ ಕಾರ್ತಿಕ್ ಗೌಡ. ಅವನು ಎಲ್ಲಿದ್ದಾನೆ ಅಂತ ಎಸ್​ಐಟಿ ಇದುವರೆಗೂ ಹುಡುಕಾಟ ನಡೆಸಿಲ್ಲ. ಈ ಸರ್ಕಾರಕ್ಕೆ ಹೇಳುತ್ತೇನೆ, ಈ ಪ್ರಕರಣ ರೇವಣ್ಣ ಹಾಗೂ ಪ್ರಜ್ವಲ್ ಮೇಲೆ ಮಾತ್ರ ಮಾಡುತ್ತಿರುವುದೇ? ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್​ಡ್ರೈವ್ ಬಿಡುಗಡೆ ಮಾಡಿರುವವರ ಮೇಲೆ ತನಿಖೆ ಮಾಡಲಾಗುತ್ತದೋ? ಎಂದು ಪ್ರಶ್ನೆ ಮಾಡಿದರು.

ಈ ತನಿಖಾ ತಂಡ ಕೇವಲ ಪ್ರಜ್ವಲ್ ರೇವಣ್ಣ ವಿರುದ್ಧದ ತನಿಖಾ ತಂಡವಾಗಿದೆ. ಪೆನ್‌ಡ್ರೈವ್ ಹಂಚಿದವರ ವಿರುದ್ಧ ಕ್ರಮಕೈಗೊಂಡಿಲ್ಲ. ಇದು ಎಸ್‌ಐಟಿ ಅಲ್ಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಇನ್ವೆಸ್ಟಿಗೇಷನ್ ಟೀಂ ಎಂದು ವಾಗ್ದಾಳಿ ನಡೆಸಿದರು. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ನವೀನ್‌ಗೌಡ ನಡುವಿನ ಆಡಿಯೋ ಸಂಭಾಷಣೆ ಮತ್ತು ನವೀನ್‌ಗೌಡ ಶ್ರೇಯಸ್ ಜೊತೆಗಿರುವ ಫೋಟೊಗಳನ್ನು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು.

ಇನ್ನು ಪ್ರಜ್ವಲ್ ಏಜೆಂಟ್ ಪೂರ್ಣಚಂದ್ರ ಜಿಲ್ಲಾಧಿಕಾರಿಗಳಿಗೆ ಪೆನ್​ಡ್ರೈವ್ ಬಗ್ಗೆ ದೂರು ನೀಡಿದ್ದರು. ದೂರು ನೀಡಿದ ನಂತರ ನವೀನ್ ಕುಮಾರ್, ಕಾರ್ತಿಕ್ ಗೌಡ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಯಿತು. ಆದರೆ, ಇದುವರೆಗೂ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ವಹಿಸಿ : ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಮೊದಲು ಹೋಗಿ ಹೇಳಿಕೆ ಕೊಡು. ನನಗೆ ಏನಾದ್ರೂ ಆದರೆ ಕುಮಾರಸ್ವಾಮಿ ಕಾರಣ ಎಂದು ಹೇಳುತ್ತಾರೆ. ಪ್ರಕರಣವನ್ನು ಎಲ್ಲಿಂದ ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದಾರೆ. ಅಷ್ಟು ಸುಲಭವಾಗಿ ಈ ಪ್ರಕರಣವನ್ನು ಮುಚ್ಚಿ ಹೋಗಲು ನಾವು ಬಿಡುವುದಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ಹಾಗೆಯೇ ಬಿಡುವುದಿಲ್ಲ. ನ್ಯಾಯಾಂಗ ತನಿಖೆ ನಡೆದರೂ ಪಾರದರ್ಶಕವಾಗಿರುತ್ತದೆ ಅಥವಾ ಈ ಪ್ರಕರಣವನ್ನು ಸಿಬಿಐಗೆ ಆದರೂ ಒಪ್ಪಿಸಲಿ ಎಂದು ಒತ್ತಾಯಿಸಿದರು.

ಎಸ್​ಐಟಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಏನನ್ನು ಹೇಳುತ್ತಾರೆಯೋ ಹಾಗೆ ತನಿಖೆ ಮಾಡುತ್ತಿದ್ದಾರೆ. ವಕೀಲ ದೇವರಾಜೇಗೌಡ ಅವರಿಗೆ ನೋಟಿಸ್ ಕೊಡದೆ ವಿಚಾರಣೆಗೆ ಕರೆಸಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಎನ್ನುವುದು ಮೊದಲು ಗೊತ್ತಾಗಬೇಕು. ಯಾವ ರೀತಿ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎನ್ನುವುದು ಅಫಿಶಿಯಲ್ ಆಗಿ ಆಗಬೇಕು. ಎಲ್ಲಾ ವಾಸ್ತವಾಂಶ ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ಪೆನ್​ಡ್ರೈವ್ ಪ್ರಕರಣ ನನಗೆ ಮೊದಲೇ ಗೊತ್ತಿದ್ದರೆ ನಾನು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುತ್ತಲೇ ಇರಲಿಲ್ಲ. ಪೆನ್ ಡ್ರೈವ್ ಮಾಡಿಕೊಂಡಿರುವವರು ಕಾಂಗ್ರೆಸ್ ನಾಯಕರು. ಹಂಚಿಕೆ ಮಾಡಿರುವವರು ನವೀನ್ ಗೌಡ ಎನ್ನುವ ವ್ಯಕ್ತಿ. ಆದರೆ, ಈ ಕ್ಷಣದವರೆಗೂ ವಿಡಿಯೋ ಹಂಚಿಕೆ ಮಾಡಿರುವವರನ್ನು ವಿಚಾರಣೆ ಮಾಡಿಲ್ಲ ಎಂದು ದೂರಿದರು.

ರಾಹುಲ್ ಗಾಂಧಿಗೂ ನೋಟಿಸ್ ಕೊಡಿ : ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ 16 ವರ್ಷದ ಸಂತ್ರಸ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಗಂಭೀರ ಆರೋಪ, ಈ ಮಾಹಿತಿ ಅವರಿಗೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತಿಳಿಯಲು ಎಸ್‌ಐಟಿ ರಾಹುಲ್ ಅವರಿಗೆ ಇದುವರೆಗೂ ಯಾಕೆ ನೋಟಿಸ್ ಕೊಟ್ಟಿಲ್ಲ. ಈ ಪ್ರಕರಣದಲ್ಲಿ 16 ವರ್ಷದ ಅಪ್ರಾಪ್ತರು ಇದ್ದಾರೆ. 400 ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ ಎಂದು ಮಹಾನುಭಾವ ರಾಹುಲ್‌ಗಾಂಧಿ ಹೇಳಿಕೆ ಕೊಟ್ಟಿದ್ದಾರೆ. ಇದು ಪೋಕ್ಸೊ ಪ್ರಕರಣ ಸಾಬೀತಾದರೆ ಕಠಿಣ ಶಿಕ್ಷೆಯಾಗುತ್ತದೆ. ಆದರೆ ಇಲ್ಲಿಯವೆರಗೂ ಯಾವುದೇ ಅಪ್ರಾಪ್ತರು ಹೇಳಿಕೆ ನೀಡಿಲ್ಲ ಯಾಕೆ?. ಯಾವ ಆಧಾರದಲ್ಲಿ ರಾಹುಲ್ ಹೇಳಿಕೆ ಕೊಟ್ಟರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರಾಹುಲ್ ಅವರಿಗೂ ನೋಟಿಸ್ ಜಾರಿ ಮಾಡಿ. ಅವರಿಂದಲೂ ಎಸ್‌ಐಟಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಓದಿ:ಮೊದಲ ಬಾರಿ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಮತದಾನ: ಸೊಸೆ ಶ್ರದ್ಧಾ, ಸಂಸದೆ ಮಂಗಲ ಅಂಗಡಿ ಸಾಥ್ - Jagadish Shettar Casts Vote

Last Updated : May 7, 2024, 5:06 PM IST

ABOUT THE AUTHOR

...view details