ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಟವಾಡಲು ಹೋಗಿ ಕೊಳವೆ ಬಾವಿಯಲ್ಲಿ ಬಿದ್ದ ಬಾಲಕ ಸಾತ್ವಿಕ್ನನ್ನು ರಕ್ಷಿಸಲಾಗಿದೆ. ಮಗುವಿಗೆ ಈಗಾಗಲೇ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆ ಹಾಗೂ ಸ್ಕ್ಯಾನ್ಗಳನ್ನು ಮಾಡಲಾಗಿದೆ. ಸಿ.ಟಿ.ಸ್ಕ್ಯಾನ್, ಅಬ್ಡೋಮೆನ್ ಟೆಸ್ಟ್, ರಕ್ತಪರೀಕ್ಷೆಗಳು ಹಾಗೂ ಎಕ್ಸ್-ರೇಸಹಿತ ಎಲ್ಲವನ್ನೂ ಮಾಡಲಾಗಿದೆ. ಬಾಲಕ ಆರೋಗ್ಯವಾಗಿದ್ದಾನೆ ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಮಾಸ್ತಿಹೊಳಿ ತಿಳಿಸಿದ್ದಾರೆ.
ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಎಂಬವರ ಪುತ್ರ ಎರಡು ವರ್ಷದ ಸಾತ್ವಿಕ್ ಬುಧವಾರ ಸಂಜೆ ಲಚ್ಯಾಣ ಗ್ರಾಮದ ತಮ್ಮ ಹೊಲದಲ್ಲಿರುವ ಕೊಳವೆ ಬಾವಿಯೊಳಗೆ ಆಕಸ್ಮಿಕವಾಗಿ ಬಿದ್ದಿದ್ದ. ನಂತರ ಸತತ 20 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ, ಆತನನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಮೊದಲು ಇಂಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕರೆತರಲಾಗಿತ್ತು. ಪಿಡಿಯಾಟ್ರಿಕ್ ಐ.ಸಿ.ಯು ವಾರ್ಡ್ನಲ್ಲಿ 48 ಗಂಟೆಗಳ ಕಾಲ ಮಗುವನ್ನು ವೈದ್ಯರ ತೀವ್ರ ನಿಗಾದಲ್ಲಿರಿಸಲಾಯಿತು. ಮಗುವಿನ ಆರೋಗ್ಯ ಶಕ್ತಿ, ಮನೋಸ್ಥೈರ್ಯ, ಮುಗ್ಧತೆ ಮೆಚ್ಚುವಂಥದ್ದು. ಅದೇ ಅವನನ್ನು ಕಾಪಾಡಿದೆ. ವೈದ್ಯಕೀಯ ಲೋಕಕ್ಕೂ ಇದು ಅಚ್ಚರಿ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.