ಧಾರವಾಡ:ವಕೀಲರ ಆರೋಗ್ಯ ವಿಮೆ ಕೊಡದ ಆದಿತ್ಯ ಬಿರ್ಲಾ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ, ಪರಿಹಾರ ನೀಡಲು ಆದೇಶಿಸಿದೆ.
ಧಾರವಾಡದ ನಿವಾಸಿ, ವಕೀಲ ಚೇತನ್ಕುಮಾರ ಈಟಿ ಎಂಬವರು 23,999 ರೂ ಮೌಲ್ಯದ ಹೊಸ ಮೊಬೈಲ್ ಅನ್ನು ಬಜಾಜ್ ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆದು ಖರೀದಿಸಿದ್ದರು. ಆ ಮೊಬೈಲ್‌ಗೆ ಆದಿತ್ಯ ಬಿರ್ಲಾ ವಿಮಾ ಕಂಪೆನಿಯಲ್ಲಿ 1 ಲಕ್ಷ ರೂ. ಮೊತ್ತದ ಗ್ರೂಪ್ ಹೆಲ್ತ್ ವಿಮೆ ಮಾಡಿಸಿದ್ದರು.
23/02/2023ರಂದು ದೂರುದಾರರು ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಕಾಲು ನೋವು ಆಗಿದ್ದರಿಂದ ಮಾಳಮಡ್ಡಿಯ ಚಿರಾಯು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದಕ್ಕಾಗಿ 1,25,000 ರೂಪಾಯಿ ಆಸ್ಪತ್ರೆ ಖರ್ಚು ಭರಿಸಿದ್ದರು.
ನಂತರ ವಿಮಾ ಪಾಲಿಸಿಯ ಕರಾರಿನಂತೆ ತಮ್ಮ ಆಸ್ಪತ್ರೆಯ ಖರ್ಚು ಕೊಡುವಂತೆ ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪೆನಿಗೆ ಎಲ್ಲ ದಾಖಲೆಗಳೊಂದಿಗೆ ಕ್ಲೈಮ್ ಮಾಡಿದ್ದರು. ಯಾವುದೇ ಸಕಾರಣ ನೀಡದೆ ಎದುರುದಾರ ವಿಮಾ ಕಂಪೆನಿಯವರು ದೂರುದಾರರ ಕ್ಲೈಮ್ ನಿರಾಕರಿಸಿದ್ದರು.
ವಿಮಾ ಕಂಪೆನಿಯ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಹೇಳಿ ವಿಮಾ ಕಂಪೆನಿ ಮೇಲೆ ಕ್ರಮ ಕೈಗೊಂಡು ಹಾಗೂ ತನಗೆ ಪರಿಹಾರ ಕೊಡಿಸಬೇಕೆಂದು ಕೋರಿ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ಕೂಲಂಕಷ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಅ ಬೋಳಶೆಟ್ಟಿ ಅವರಿದ್ದ ಆಯೋಗ, ದೂರುದಾರ ತನ್ನ ಮೊಬೈಲ್ ಮೇಲೆ ಎದುರುದಾರ ವಿಮಾ ಕಂಪೆನಿಯಿಂದ 1 ಲಕ್ಷ ರೂ ಮೊತ್ತಕ್ಕೆ ಆರೋಗ್ಯ ವಿಮೆ ಮಾಡಿಸಿದ್ದಾರೆ. ಆ ವಿಮಾ ಅವಧಿ ಚಾಲ್ತಿಯಿರುವಾಗ ದೂರುದಾರ ಆಕಸ್ಮಿಕವಾಗಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಧಾರವಾಡದ ಚಿರಾಯು ಆಸ್ಪತ್ರೆಯಲ್ಲಿ 1,25,000 ರೂ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಆ ಚಿಕಿತ್ಸಾ ವೆಚ್ಚದ ಹಣ ಸಂದಾಯ ಮಾಡುವುದು ಎದುರುದಾರ ಆದಿತ್ಯ ಬಿರ್ಲಾ ವಿಮಾ ಕಂಪೆನಿಯ ಕರ್ತವ್ಯ. ಆದರೆ, ಆರೋಗ್ಯ ವಿಮಾ ಪರಿಹಾರ ನಿರಾಕರಿಸಿ ಎದುರುದಾರರು, ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ವಿಮಾ ಪಾಲಿಸಿ ನಿಯಮದಂತೆ ಎದುರುದಾರ ಆದಿತ್ಯ ಬಿರ್ಲಾ ವಿಮಾ ಕಂಪೆನಿಯವರು ದೂರುದಾರರಿಗೆ 30 ದಿನಗಳೊಳಗಾಗಿ 1 ಲಕ್ಷ ರೂ ಆರೋಗ್ಯ ವಿಮಾ ಪರಿಹಾರ ಸಂದಾಯ ಮಾಡುವಂತೆ ತೀರ್ಪು ನೀಡಿ ಆದೇಶಿಸಿದೆ. ಅಲ್ಲದೇ, ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 25,000 ರೂ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚವಾಗಿ 10,000 ರೂ.ಯನ್ನು ಕೊಡುವಂತೆಯೂ ಬಿರ್ಲಾ ವಿಮಾ ಕಂಪೆನಿಗೆ ಆಯೋಗ ನಿರ್ದೇಶಿಸಿದೆ.
ಇದನ್ನೂ ಓದಿ:ಸೇವಾ ನ್ಯೂನತೆ: ಪರಿಹಾರ ನೀಡಲು ಬ್ಯಾಂಕ್ಗೆ ಗ್ರಾಹಕರ ನ್ಯಾಯಾಲಯ ಆದೇಶ - CONSUMER COURT ORDER