ಕರ್ನಾಟಕ

karnataka

ETV Bharat / state

ಮಲ್ಪೆ ಬೀಚ್​ನಲ್ಲಿ ಜನವೋ ಜನ; ಜೀವ ಪಣಕ್ಕಿಡುತ್ತಿರುವ ಪ್ರವಾಸಿಗರು, ರಕ್ಷಣೆಗೆ ಬೇಕಿದೆ ಹೆಚ್ಚಿನ ಗಮನ - TOURISTS SAFETY

ಬೀಚ್​ಗಳಿಗೆ ಶೈಕ್ಷಣಿಕ ಪ್ರವಾಸ ಬರುವ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಕಣ್ಣಿಡುವ ಜೊತೆಗೆ, ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಈ ಕುರಿತು ನಮ್ಮ ಪ್ರತಿನಿಧಿ ಆದಿತ್ಯ ಐತಾಳ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

Udupi Malpe Beach
ಉಡುಪಿ ಮಲ್ಪೆ ಬೀಚ್​ (ETV Bharat)

By ETV Bharat Karnataka Team

Published : Dec 19, 2024, 6:07 PM IST

Updated : Dec 19, 2024, 7:20 PM IST

ಉಡುಪಿ:ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಇತ್ತೀಚೆಗೆ ನಾಲ್ವರು ವಿದ್ಯಾರ್ಥಿನಿಯರು ಬಲಿಯಾದ ಬಳಿಕ ಬೀಚ್​ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗಾಗಿ ಶಾಲಾ ಪ್ರವಾಸಕ್ಕೆಂದು ಬರುವವರು ಮಲ್ಪೆ ಬೀಚ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬೀಚ್​ನಲ್ಲಿ ಆಟ ಆಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನೀರಿಗಿಳಿಯುವ ಮಕ್ಕಳನ್ನು ತಡೆಯುವುದೇ ಒಂದು ಸವಾಲಾಗಿದೆ. ಮಲ್ಪೆ ಬೀಚ್​ನಲ್ಲಿ ಶಾಲಾ ಮಕ್ಕಳ ಮೇಲೆ ಶಿಕ್ಷಕರು ನಿಗಾ ವಹಿಸುವ ಜೊತೆಗೆ ಜಿಲ್ಲಾಡಳಿತ ಮತ್ತಷ್ಟು ಎಚ್ಚರ ವಹಿಸಬೇಕಿದೆ.

ಮಾತು ಕೇಳದ ವಿದ್ಯಾರ್ಥಿಗಳು, ಪ್ರವಾಸಿಗರು: "ಸಮುದ್ರ ಅಲೆಗಳನ್ನು ಕಂಡ ಕೂಡಲೇ ಮಕ್ಕಳು ನೀರಿಗಿಳಿದು ಮೈಮರೆಯುತ್ತಾರೆ. ಆದರೆ ಸೌಂದರ್ಯ ತುಂಬಿದ ಸಮುದ್ರದಲ್ಲಿ ಅಪಾಯವೂ ಇರುವುದರ ಬಗ್ಗೆ ಪ್ರವಾಸಿಗರಿಗೆ ಅರಿವು ಇರುವುದಿಲ್ಲ. ಶಾಂತವಾಗಿ ಕಾಣುವ ಸಮುದ್ರದ ದೂರ ದೂರಕ್ಕೆ ಈಜುವ ಪಯತ್ನ ಮಾಡುತ್ತಾರೆ. ಅದೆಷ್ಟೋ ಮಂದಿ ಕೆರೆಯಲ್ಲಿ, ನದಿ ಈಜಿದಂತೆ ಸಮುದ್ರದಲ್ಲಿ ಈಜುವ ಹುಚ್ಚು ಧೈರ್ಯ ಮಾಡಿ ಅಪಾಯವನ್ನು ತಂದುಕೊಳ್ಳುತ್ತಾರೆ. ಸದ್ಯ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಲ್ಪೆ ಬೀಚ್​ಗೆ ಶಾಲಾ ಪ್ರವಾಸದ ದಂಡು ಹರಿದು ಬರುತ್ತಿದೆ. ಪ್ರವಾಸಕ್ಕೆ ಬಂದ ಮಕ್ಕಳನ್ನು ನೀರಿಗಿಳಿಯದಂತೆ ತಡೆಯುವುದೇ ಒಂದು ಸಾಹಸವಾಗಿದೆ" ಎನ್ನುತ್ತಾರೆ ವಾಟರ್​ ಸ್ಪೋರ್ಟ್ಸ್​ ನಿರ್ವಾಹಕ ಶರತ್​ ಶೆಟ್ಟಿ.

ಮಲ್ಪೆ ಬೀಚ್​ನಲ್ಲಿ ಜನವೋ ಜನ; ಜೀವ ಪಣಕ್ಕಿಡುತ್ತಿರುವ ಪ್ರವಾಸಿಗರು, ರಕ್ಷಣೆಗೆ ಬೇಕಿದೆ ಹೆಚ್ಚಿನ ಗಮನ (ETV Bharat)

"ಡಿಸೆಂಬರ್, ಜನವರಿ ಬಂತೆಂದೆರೆ ಎಲ್ಲ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಆರಂಭವಾಗುತ್ತದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಉಡುಪಿ ಕಡೆ ಬರುತ್ತಾರೆ. ಉಡುಪಿ ಕೃಷ್ಣ ದರ್ಶನ ಪೂರೈಸಿ, ಮಲ್ಪೆಯತ್ತ ಧಾವಿಸುತ್ತಾರೆ. ಆದರೆ ಸಮುದ್ರಕ್ಕೆ ಇಳಿದು ಅಲೆಗಳ ಜೊತೆಗೆ ಆಟವಾಡದಂತೆ ತಡೆಯುವುದು ಕಷ್ಟ ಸಾಧ್ಯವಾಗಿದೆ. ಸಮುದ್ರದಲ್ಲಿ ಕಾಲ ಕಳೆಯುವ ಪ್ರವಾಸಿಗರ ಮೇಲೆ ನಿಗಾ ವಹಿಸಲು, ಈಜಾಡದಂತೆ ತಡೆಯುವುದಕ್ಕೆ ಮಲ್ಪೆ ಬೀಚ್​ನಲ್ಲಿ ಹೆಚ್ಚಿನ ಲೈಫ್ ಗಾರ್ಡ್​ಗಳ ಅಗತ್ಯವಿದೆ. ಜೊತೆಗೆ ಶಿಕ್ಷಕರು ಕೂಡ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರವಾಸಿಗರು, ದೂರ ನಿಂತು ಸಮುದ್ರ ನೋಡಿ ತೀರ ಪ್ರದೇಶದಲ್ಲಿ ಮಾತ್ರ ಆಟವಾಡಿ ಎನ್ನುವ ಬೀಚ್ ನಿರ್ವಾಹಕರ ಮಾತಿಗೆ ಬೆಲೆ ಕೊಡುವುದಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಈಜಾಡಲು ಸೂಚನೆ ನೀಡಿದರೂ, ಪಾಲಿಸುತ್ತಿಲ್ಲ. ಈ ಎಲ್ಲ ಕಾರಣದಿಂದಲೇ ಮಲ್ಪೆ ಪ್ರವಾಸ ಸವಾಲಾಗಿ ಪರಿಣಮಿಸಿದೆ" ಎಂದು ಅವರು ವಿವರಿಸಿದರು.

ಜಿಲ್ಲಾಡಳಿತ ಬೀಚ್​ನತ್ತ ಗಮನ ಹರಿಸಬೇಕು: ಈಗಾಗಲೇ ಹವಾಮಾನ ಇಲಾಖೆ ಮತ್ತೊಂದು ಗಾಳಿ ಮಳೆಯ ಸೂಚನೆ ನೀಡಿದೆ. ಸಮುದ್ರ ಮತ್ತಷ್ಟು ರಫ್ ಆಗುವ ಸಾಧ್ಯತೆ ಹೆಚ್ಚಿದ್ದು, ಕಡಲ ತೀರದಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಲೈಫ್ ಗಾರ್ಡ್ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ಕಾರ್ಯಾಚರಣೆಗೆ ಜೆಟ್​ ಸ್ಕಿ ಬೋಟ್​ಗಳನ್ನು ವ್ಯವಸ್ಥೆ ಮಾಡುವ ಮೂಲಕ ಸದ್ಯ ಬೀಚ್​ಗೆ ಬರುವ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ:ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ: ಸಿಎಂ ಪರಿಹಾರ ಘೋಷಣೆ

Last Updated : Dec 19, 2024, 7:20 PM IST

ABOUT THE AUTHOR

...view details