ಕರ್ನಾಟಕ

karnataka

ETV Bharat / state

ದೇಶದ ಸೆಮಿಕಂಡಕ್ಟರ್ ವಹಿವಾಟು ವಾರ್ಷಿಕ 100 ಶತಕೋಟಿ ಡಾಲರ್ ತಲುಪಲಿದೆ: ಮೂರ್ತಿ ದಸಾಕ

ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ (ಬಿಟಿಎಸ್) 'ಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿ' ಕುರಿತು ಗೋಷ್ಠಿ ನಡೆಯಿತು.

tech summit
ಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿ' ಗೋಷ್ಠಿ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ಥಳೀಯ ಬೇಡಿಕೆ ಹೆಚ್ಚಾಗುತ್ತಿದ್ದು, ಐದಾರು ವರ್ಷಗಳಲ್ಲಿ ದೇಶ ಈ ಕ್ಷೇತ್ರದಲ್ಲಿ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಹಂತ ಮುಟ್ಟಲಿದೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಮೂರ್ತಿ ದಸಾಕ ಹೇಳಿದರು.

27ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ (ಬಿಟಿಎಸ್) ಏರ್ಪಡಿಸಿದ್ದ 'ಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿ' ಗೋಷ್ಠಿಯಲ್ಲಿ ಮಾತನಾಡಿದ ಅವರು, ''ದೇಶವು 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯ ಗುರಿಯನ್ನು ಸಾಧಿಸಬೇಕೆಂದರೆ, ಸ್ಥಳೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಬೇಕು. ಇದಕ್ಕೆ ಬೇಕಾದ ಸಮರ್ಪಕ ಕಾರ್ಯ ಪರಿಸರವನ್ನು ನಾವು ಅಭಿವೃದ್ಧಿಪಡಿಸಬೇಕು. ಇದರಿಂದ ದೇಶವು ಸುಸ್ಥಿರ ಅಭಿವೃದ್ಧಿಯ ಕನಸನ್ನು ನನಸು ಮಾಡಿಕೊಳ್ಳಬಹುದು'' ಎಂದು ಅಭಿಪ್ರಾಯಪಟ್ಟರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ:''ಮಾರುಕಟ್ಟೆ ಮತ್ತು ಜಾಗತಿಕ ರಾಜಕಾರಣ ಎರಡೂ ಈಗ ಭಾರತಕ್ಕೆ ಅನುಕೂಲಕರವಾಗಿದ್ದು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗ ನಮ್ಮ ಸಮಯ ಕೂಡಿಬಂದಿದೆ ಎಂದು ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಸೂರಜ್ ರಂಗರಾಜನ್ ಹೇಳಿದ್ದಾರೆ. ಕಳೆದ 15 ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿದೆ. ಈಗ ಇದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ'' ಎಂದರು.

ಮೈಕ್ರಾನ್ ಟೆಕ್ನಾಲಜಿಯ ಹಿರಿಯ ನಿರ್ದೇಶಕ ಗೋಕುಲಕುಮಾರ್ ಮಾತನಾಡಿ, ''ಭಾರತವು ಈಗಾಗಲೇ ಸೆಮಿಕಂಡಕ್ಟರ್ ಉತ್ಪಾದನೆಗೆ ಧುಮುಕಿದೆ. ಇನ್ನು ಮುಂದೆ ಇದಕ್ಕೆ ತಕ್ಕ ಉತ್ತೇಜನ ಕೊಡುವುದು ಆಗತ್ಯವಾಗಿದೆ. ಇದು ಸಾಧ್ಯವಾಗಬೇಕೆಂದರೆ, ದೇಶದಲ್ಲಿ ಇರುವ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ದಕ್ಷವಾದ ಮೂಲಸೌಕರ್ಯವನ್ನು ಸೃಷ್ಟಿಸಬೇಕು. ಭಾರತಕ್ಕೆ ಇದನ್ನು ಸಾಧಿಸುವ ಶಕ್ತಿ ಇದೆ'' ಎಂದು ಪ್ರತಿಪಾದಿಸಿದರು.

ಏಕಗವಾಕ್ಷಿ ವ್ಯವಸ್ಥೆ ಬರಬೇಕು:ಗೋಷ್ಠಿಯನ್ನು ನಿರ್ವಹಿಸಿದ ಲ್ಯಾಮ್ ರೀಸರ್ಚ್ ಉಪಾಧ್ಯಕ್ಷ ರಂಗೇಶ್ ರಾಘವನ್, ''ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಒಳ್ಳೆಯ ನೀತಿಗಳಿವೆ. ಆದರೆ ಖಾಸಗಿ ಉದ್ಯಮಿಗಳು ನಿಜಕ್ಕೂ ಏನು ಮಾಡುತ್ತಿದ್ದಾರೆ ಎನ್ನುವ ತಿಳಿವಳಿಕೆ ಸ್ಥಳೀಯ ಮಟ್ಟದಲ್ಲಿ ಹಲವು ಇಲಾಖೆಗಳಿಗೆ ಇರುವುದಿಲ್ಲ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತಿದೆ. ಆದರೆ ಒಂದು ಗವಾಕ್ಷಿಯ ಹಿಂದೆ ಇನ್ನೂ 27 ಗವಾಕ್ಷಿಗಳಿವೆ. ಇದು ಉದ್ಯಮಿಗಳು ಎದುರಿಸುತ್ತಿರುವ ವಾಸ್ತವವಾಗಿದೆ. ನಿಜವಾದ ಅರ್ಥದಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಉದ್ಯಮಿಗಳಿಗೆ ಅನುಕೂಲವಾಗಲಿದೆ'' ಎಂದು ಹೇಳಿದರು.

ಇದನ್ನೂ ಓದಿ:ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್‌ ಮಾಡೆಲ್‌ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ

ABOUT THE AUTHOR

...view details