ಕರ್ನಾಟಕ

karnataka

ETV Bharat / state

ರಾಜ್ಯ ಪೊಲೀಸ್ ಇಲಾಖೆಯ ಶಿಸ್ತು, ಸೌಜನ್ಯತೆ ದೇಶದಲ್ಲಿ ಎಲ್ಲಿಯೂ ಇಲ್ಲ: ಡಿಜಿಪಿ ಕಮಲ್ ಪಂತ್ - DGP Kamal Pant - DGP KAMAL PANT

ರಾಜ್ಯ ಅಗ್ನಿಶಾಮಕ ಇಲಾಖೆಯ ಡಿಜಿಪಿ ಕಮಲ್ ಪಂತ್ (ಜೂನ್​ 30) ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಲ್ಲಿ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಅಲೋಕ್ ಮೋಹನ್ ಸಮ್ಮುಖದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

DGP KAMAL PANT
ಡಿಜಿಪಿ ಕಮಲ್ ಪಂತ್ (ETV Bharat)

By ETV Bharat Karnataka Team

Published : Jun 29, 2024, 6:18 PM IST

Updated : Jun 29, 2024, 7:16 PM IST

ಡಿಜಿಪಿ ಕಮಲ್ ಪಂತ್ ಬೀಳ್ಕೊಡುಗೆ ಕಾರ್ಯಕ್ರಮ (ETV Bharat)

ಬೆಂಗಳೂರು:ಉತ್ತರಾಖಂಡ್ ನನ್ನ ಜನ್ಮಭೂಮಿಯಾಗಿದ್ದರೂ, ಕರ್ನಾಟಕ ನನ್ನ ಕರ್ಮಭೂಮಿಯಾಗಿದೆ. ಕರ್ನಾಟಕದಲ್ಲಿ ಕೆಲಸ ಮಾಡಿರುವುದು ಜೀವನದಲ್ಲಿ ನನ್ನ ಪುಣ್ಯವೆಂದು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಶಿಸ್ತು, ಸೌಜನ್ಯತೆ ದೇಶದಲ್ಲಿ ಎಲ್ಲಿಯೂ ಇಲ್ಲ ಎಂದು ರಾಜ್ಯ ಅಗ್ನಿಶಾಮಕ ಇಲಾಖೆಯ ಡಿಜಿಪಿ ಕಮಲ್ ಪಂತ್ ಹೇಳಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿರುವ ಕಮಲ್ ಪಂತ್ ನಾಳೆ (ಜೂನ್​ 30) ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಇಂದು ಕೋರಮಂಗಲದ 3ನೇ ಬೆಟಾಲಿಯನ್ ಪೊಲೀಸ್ ಪರೇಡ್ ಮೈದಾನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಕಲ ಪೊಲೀಸ್ ಕವಾಯತು ಮೂಲಕ ಗೌರವ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಪಂತ್, 1990ರಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದೆ. ಬಳಿಕ ಕರ್ನಾಟಕ ಕೇಡರ್ ಆಗಿ ರಾಜ್ಯಕ್ಕೆ ಬಂದೆ. 1980-1995ರ ವರೆಗೂ ದೇಶದೆಲ್ಲೆಡೆ ಕೋಮುಗಲಭೆ ಹೆಚ್ಚಾಗಿದ್ದವು. ತಿಂಗಳುಗಟ್ಟಲೇ ಕರ್ಫ್ಯೂ ಹೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. 1995ರಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ ರಾಜ್ಯದಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದೆ. ರಾಜ್ಯಕ್ಕೂ ಬರುವ ಮುನ್ನ ಕೊಂಚ ಸಂಕೋಚದ ಮನಸ್ಥಿತಿಯಲ್ಲಿದ್ದೆ. ಹಿಂದಿ ರಾಜ್ಯದಿಂದ ಬಂದವನು ನಾನು, ಹೇಗೆ ಜನ ಸ್ವೀಕರಿಸುತ್ತಾರೆ ಎಂಬ ಅಳಕಿತ್ತು. ನಂತರ ಬೆಂಗಳೂರು, ಮೈಸೂರು, ಕಲಬುರಗಿ ಸೇರಿ ಹಲವು ಕಡೆ ಕೆಲಸ ಮಾಡಿದ ಬಳಿಕ ಜನರು ನನ್ನನ್ನು ಒಪ್ಪಿಕೊಂಡರು ಎಂದು ಹೇಳಿದರು.

ಕಮಲ್ ಪಂತ್ ಅವರಿಗೆ ಸ್ಮರಣ ಫಲಕ ವಿತರಿಸಿದ ಡಿಜಿಪಿ ಅಲೋಕ್ ಮೋಹನ್ (ETV Bharat)

ಕರ್ನಾಟಕದಲ್ಲಿ ಕೆಲಸ ಮಾಡಿರುವುದು ಜೀವನದಲ್ಲಿ ನನ್ನ ಪುಣ್ಯವೆಂದು ಭಾವಿಸುತ್ತೇನೆ. ರಾಜ್ಯದ ಕರಾವಳಿ, ಮಲೆನಾಡು ಸೇರಿ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಸಿಬಿಐನಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. ಅಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಿದ್ದೆ. ಬಳಿಕ ರಾಜ್ಯದಲ್ಲಿ ವೀರಪ್ಪನ್ ಅಟ್ಟಹಾಸ, ರೈತ ಚಳವಳಿ, ಕೋಮು ಗಲಭೆಯ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಸ್ಮರಿಸಿದರು.

1992ರಲ್ಲಿ ನಾನು ಬೆಂಗಳೂರಿಗೆ ಬಂದಾಗ ಬಾಬ್ರಿ ಮಸೀದಿ ವಿವಾದ ಭುಗಿಲೆದ್ದಿತ್ತು. 1994ನಲ್ಲಿ ವಿವಾದ ಇನ್ನಷ್ಟು ಹೆಚ್ಚಾಗಿತ್ತು. ಆ ವೇಳೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಮಾತ್ರ ಕೆಎಸ್ಆರ್​ಪಿ ಪಡೆಗಳಿದ್ದವು. ದೊಡ್ಡ ಮಟ್ಟದಲ್ಲಿ ಗಲಭೆ ಉಂಟಾದಾಗ ಕೆಎಸ್ಆರ್​ಪಿ ಸಿಬ್ಬಂದಿ ತಿಂಗಳುಗಟ್ಟಲೇ ಮನೆಗೆ ಹೋಗದಿರುವುದನ್ನು ಹತ್ತಿರದಿಂದಲೇ ಕಂಡಿದ್ದೇನೆ. ಆದರೆ ಪ್ರಸ್ತುತ ವಾತಾವರಣ ಬದಲಾಗಿದೆ. ರಾಜ್ಯದಲ್ಲಿ 14 ಕಡೆ ಕೆಎಸ್ ಆರ್​ಪಿ ಪಡೆಗಳಿವೆ ಎಂದರು.

34 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ನಾನು ಸಿದ್ಧಾಂತ ಮೇಲೆ ಕೆಲಸ ಮಾಡಿದ್ದೇನೆ. ಅದುವೇ ನ್ಯಾಯದ ಸಿದ್ದಾಂತ. ನ್ಯಾಯವನ್ನು ಎಂದಿಗೂ ಎತ್ತಿ ಹಿಡಿಯಬೇಕು. ಧರ್ಮೋ ರಕ್ಷತಿ ರಕ್ಷಿತಃ.. ನ್ಯಾಯವನ್ನು ಕಾಪಾಡಿದರೆ ನ್ಯಾಯ ನಿಮ್ಮನ್ನ ಕಾಪಾಡುತ್ತದೆ. ಅದನ್ನು ಕೊಂದು ಹಾಕಿದರೆ, ಅದು ನಿಮ್ಮನ್ನು ಕೊಲ್ಲಲಿದೆ ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿದೆ. ಇಲ್ಲಿರುವ ಶಿಸ್ತು, ಸೌಜನ್ಯತೆ ದೇಶದಲ್ಲಿ ಎಲ್ಲಿಯೂ ಇಲ್ಲ. ಈ ರಾಜ್ಯಕ್ಕೆ ತನ್ನದೇ ಆದ ಸಂಸ್ಕೃತಿ, ಜ್ಞಾನವಿದೆ. ಬೆಂಗಳೂರು ಇಡೀ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಪೊಲೀಸ್ ಕಮೀಷನರ್ ಆಗಿ ಕೆಲಸ ಮಾಡಿರುವುದು ಖುಷಿ ತಂದಿದೆ. ತನ್ನೊಂದಿಗೆ ಕೆಲಸ ಮಾಡಿದ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ತನ್ನ ಕೃತಜ್ಞತೆ ಅರ್ಪಿಸಿಸುತ್ತೇನೆ ಎಂದು ಪಂತ್ ಹೇಳಿದರು.

ಇದನ್ನೂ ಓದಿ:ದಕ್ಷತೆ, ಪ್ರಾಮಾಣಿಕತೆಗೆ ಹೆಸರಾದ ಡಿಜಿಪಿ ಕಮಲ್ ಪಂತ್ ಭಾನುವಾರ ನಿವೃತ್ತಿ

Last Updated : Jun 29, 2024, 7:16 PM IST

ABOUT THE AUTHOR

...view details