ಕರ್ನಾಟಕ

karnataka

ETV Bharat / state

ಗದಗ: ಎರಡು ಪ್ರತಿಷ್ಠಿತ ಮಠಗಳ ನಡುವೆ ಸಂಘರ್ಷ, ತೋಂಟದಾರ್ಯ ಮಠದ ನಡೆಗೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ಯ 75ನೇ ಜಯಂತಿ‌ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುವುದನ್ನು ನಿಲ್ಲಿಸಬೇಕು'' ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದರು. ಅದಕ್ಕೆ ತಿರುಗೇಟು ನೀಡಿದ ತೋಂಟದಾರ್ಯ ಸಿದ್ದರಾಮ ಶ್ರೀಗಳು, ''ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಇದರಿಂದ ಭಾವೈಕ್ಯತೆ ಆಚರಣೆ ಮಾಡಿದರೇ ತಪ್ಪೇನು?'' ಎಂದು ಹೇಳಿಕೆ ನೀಡಿದ್ದಾರೆ.

Tontadarya Math  Dingaleshwar Swamiji  ಎರಡು ಮಠಗಳ ನಡುವೆ ಸಂಘರ್ಷ  ತೋಂಟದಾರ್ಯ ಮಠ  ದಿಂಗಾಲೇಶ್ವರ ಶ್ರೀ
ಗದಗ: ಎರಡು ಪ್ರತಿಷ್ಠಿತ ಮಠಗಳ ನಡುವೆ ಸಂಘರ್ಷ, ತೋಂಟದಾರ್ಯ ಮಠದ ನಡೆಗೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ

By ETV Bharat Karnataka Team

Published : Feb 20, 2024, 9:45 AM IST

Updated : Feb 20, 2024, 1:17 PM IST

ಗದಗ: ಎರಡು ಪ್ರತಿಷ್ಠಿತ ಮಠಗಳ ನಡುವೆ ಸಂಘರ್ಷ, ತೋಂಟದಾರ್ಯ ಮಠದ ನಡೆಗೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ

ಗದಗ:''ಡಂಬಳ ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ಯ 75ನೇ ಜಯಂತಿ‌ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು'' ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಫೆ.21ರಂದು ಲಿಂ. ಡಾ.ತೋಟದ ಸಿದ್ಧಲಿಂಗ ಸ್ವಾಮೀಜಿ ಅವರ 75ನೇ ಜಯಂತಿ ದಿನವನ್ನು ಭಾವೈಕ್ಯತೆ ದಿನವನ್ನು ಆಚರಿಸುವುದಾಗಿ, ಜೊತೆಗೆ ಭಾವೈಕ್ಯತೆಯ ಹರಿಹಾರ ಎಂಬುದಾಗಿ ತೋಂಟದಾರ್ಯ ಮಠವು ತಿಳಿಸಿದೆ. ಇದನ್ನು ಕೂಡಲೇ ಹಿಂಪಡೆಯಬೇಕು'' ಎಂದರು.

''ಸುಮಾರು 500 ವರ್ಷಗಳ ಭಾವೈಕ್ಯತಾ ಪರಂಪರೆ ಇತಿಹಾಸವನ್ನು ಹೊಂದಿರುವ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷ ಪದವನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಬಳಸಿರುವುದನ್ನು ಖಂಡಿಸುತ್ತೇವೆ. ಅವರ ಜಯಂತಿ ದಿನವನ್ನು ಭಾವೈಕ್ಯತೆಯ ದಿನ ಎಂದು ಪ್ರಕಟಿಸಿರುವುದು ಶಿರಹಟ್ಟಿ ಮಠದ ಭಕ್ತವೃಂದಕ್ಕೆ ಅಪಾರ ನೋವನ್ನುಂಟು ಮಾಡಿದೆ'' ಎಂದ ಅವರು, ''ಅಲ್ಲದೇ, ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೇ ತಮ್ಮ ಜೀವಿತಾವಧಿಯ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಕರ್ತೃಗಳನ್ನು ಭಾವೈಕ್ಯತೆಯ ಹರಿಕಾರರೆಂದು ತಿಳಿಸಿದ್ದಾರೆ'' ಎಂದು ಹೇಳಿದರು.

''ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪ್ರಾತಿನಿಧ್ಯ ಹೊಂದಿರುವ ಹಾಗೂ ವಿರಕ್ತಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವೀರಶೈವ ಲಿಂಗಾಯತ ಧರ್ಮವನ್ನು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಹೋರಾಟದ ಮುಂದಾಳತ್ವ ವಹಿಸಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಡೆಯನ್ನು 560ಕ್ಕೂ ಹೆಚ್ಚು ಮಠಾಧೀಶರು ಖಂಡಿಸಿದ್ದರು.

ಫೆ.21ಕ್ಕೆ ಗದಗನಲ್ಲಿ ಕರಾಳ ದಿನ - ಎಚ್ಚರಿಕೆ:ಶಿರಹಟ್ಟಿ ಫಕೀರೇಶ್ವರ ಮಠವು 50 ಶಾಖಾಮಠಗಳನ್ನು, 5 ಶಾಖಾ ದರ್ಗಾಗಳನ್ನು ಹೊಂದಿದೆ. ಫಕ್ಕಿರೇಶ್ವರ ಮಠದಲ್ಲಿ ಮಂದಿರವಿದೆ ಹಾಗೂ ಮಸೀದಿಯಿದೆ. ಗೋಪುರ ಮತ್ತು ಮೀನಾರ ಕೂಡಾ ಇದೆ. ಫಕೀರೇಶ್ವರ ಹೆಸರಿನಲ್ಲಿ ಫಕೀರನು ಇದ್ದಾನೆ, ಈಶ್ವರನೂ ಇದ್ದಾನೆ. ಜಗದ್ಗುರು ಫಕೀರೇಶ್ವರ ಮುಕುಟಪ್ರಾಯ ಭಾವೈಕ್ಯತೆ ಎಂಬ ಪದವನ್ನು ನಮ್ಮಿಂದ ಕಸಿದುಕೊಳ್ಳಲು ಯತ್ನಿಸುತ್ತಿರುವುದರಿಂದ, ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತೋಂಟದಾರ್ಯ ಮಠದ ಶ್ರೀಗಳಿಗೂ, ಆಡಳಿತ ವರ್ಗದವರಿಗೂ ಮನವರಿಕೆ ಮಾಡಿಕೊಡುತ್ತೇವೆ. ಅವರ ಭಾವೈಕ್ಯತೆ ಪದವನ್ನು ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ. ಸಂಧಾನ ವಿಫಲವಾದಲ್ಲಿ ಫೆ.21ರಂದು ಗದಗ ನಗರದಲ್ಲಿ ನಮ್ಮ ಕರಾಳ ದಿನವನ್ನು ಆಚರಿಸಲಾಗುವುದು ಎಂದು ಕಿಡಿಕಾರಿದರು.

ಫಕೀರೇಶ್ವರ ಮಠದ ಭಕ್ತರಾದ ಎನ್.ಆರ್. ಕುಲಕರ್ಣಿ ಮಾತನಾಡಿ, ''ಭಾವೈಕ್ಯತಾ ದಿನ ವಿಷಯದ ಕುರಿತು ತೋಂಟದಾರ್ಯ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿಯವರು ಎರಡು ಮಠಗಳ ಭಕ್ತರಿಗೆ ಸಂಘರ್ಷಕ್ಕೆ ಉಂಟು ಮಾಡುವ ನಿರ್ಧಾರ ಕೈಬಿಡದಿದ್ದರೆ. ಫೆ.21ರಂದು ಗದಗ ನಗರದ ಬನ್ನಿಕಟ್ಟಿ ಸಮೀಪದಲ್ಲಿರುವ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ಶಾಖಾಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಮಾಲಾರ್ಪಣೆ ಮಾಡುತ್ತೇವೆ. ನಮ್ಮ ಪಾಲಿನ ಕರಾಳ ದಿನಾಚರಣೆ ನಿಮಿತ್ತ ಗದುಗಿನ ಬನ್ನಿಕಟ್ಟಿ, ಪಂಚರ ಹೊಂಡ, ಟಾಂಗಾ ಕೂಟ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ಬೈಕ್ ರ‍್ಯಾಲಿ, ಪಥ ಸಂಚಲನ ನಡೆಸಿ ತೋಂಟದಾರ್ಯ ರಥಬೀದಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗುವುದು'' ಎಂದರು. ಸುದ್ದಿಗೋಷ್ಠಿಯಲ್ಲಿ ಸಿ.ಸಿ. ನೂರಶೆಟ್ಟರ, ಶಿವನಗೌಡ ಪಾಟೀಲ, ಸಂದೀಪ ಕಪ್ಪಒತ್ತನವರ, ಫಕ್ಕೀರೇಶ ರಟ್ಟಿಹಳ್ಳಿ ಸೇರಿ ಅನೇಕರು ಇದ್ದರು.

ದಿಂಗಾಲೇಶ್ವರ ಸ್ವಾಮಿಜಿಗೆ ಸಿದ್ಧರಾಮ ಶ್ರೀ ತಿರುಗೇಟು:''ಮಸೀದಿ ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಇದರಿಂದ ಭಾವೈಕ್ಯತೆ ಆಚರಣೆ ಮಾಡಿದರೇ ತಪ್ಪೇನು?'' ಎಂದು ತೋಂಟದಾರ್ಯ ಸಿದ್ದರಾಮ ಶ್ರೀಗಳು ತಿರುಗೇಟು ನೀಡಿದ್ದಾರೆ.

ಭಾವೈಕ್ಯತೆ ದಿನಾಚರಣೆ ವಿರೋಧಿಸಿ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿದ ವಿಷಯ ಜಿಲ್ಯಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಗರದ ತೋಂಟದಾರ್ಯ ಮಠದಲ್ಲೂ ದಿಂಗಾಲೇಶ್ವರ ಶ್ರೀ ಹೇಳಿಕೆ ವಿರೋಧಿಸಿ ಸಿದ್ಧರಾಮ ಶ್ರೀಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ''ಭಾವೈಕ್ಯತೆ ಎಂಬುವುದು ಒಬ್ಬ ವ್ಯಕ್ತಿಗೆ ಸೀಮಿತ ಆಗಿದ್ದಲ್ಲ. ಎಲ್ಲರೂ ಆಚರಿಸಬಹುದು. ದಿಂಗಾಲೇಶ್ವರ ಶ್ರೀಗಳು ಕರಾಳ ದಿನ ಆಚರಣೆ ಮಾಡಿದರೇ ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ನಮಗೆ ಸರ್ಕಾರ ರಕ್ಷಣೆ ನೀಡಬೇಕು. ಕರಾಳ ದಿನ ಆಚರಣೆ ತಪ್ಪಾದರೆ ಸರ್ಕಾರ ಕರಾಳ ದಿನ ಆಚರಣೆಯನ್ನು ನಿಷೇಧ ಮಾಡಬೇಕು. ಅಥವಾ ಸರ್ಕಾರ ನಮಗೆ ನಿರ್ದೇಶನ ನೀಡಬೇಕು. ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ'' ಎಂದು ತಿಳಿಸಿದರು.

''ತೋಂಟದಾರ್ಯ ಮಠದಲ್ಲಿ ಸಾಕಷ್ಟು ಸಾಮರಸ್ಯ ಕೆಲಸ ಮಾಡಿದ್ದೇವೆ. ಜಾತ್ರಾ ಕಮಿಟಿಗೆ ಮುಸ್ಲಿಂ ಸಮುದಾಯದವರನ್ನು ಆಯ್ಕೆ ಮಾಡಿದ ಉದಾಹರಣೆ ಇದೆ. ಮಠದಲ್ಲಿ ಅನೇಕ ಮುಸ್ಲಿಂ ಭಕ್ತರಿದ್ದಾರೆ. ಲಿಂ. ಸಿದ್ಧಲಿಂಗ ಶ್ರೀಗಳು ಎಲ್ಲ ಸಮುದಾಯದ ಜೊತೆ ಅತ್ಯಂತ ಭಾವೈಕ್ಯತೆಯಿಂದ ಇದ್ದರು. ಸಿದ್ಧಲಿಂಗ ಶ್ರೀಗಳ ಮೇಲೆ ಆರೋಪ ಸಲ್ಲ. ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ. ನಮ್ಮ ಕಾಯಕ ನಮ್ಮ ಜೊತೆ ಇರಲಿ. ಸೌಹಾರ್ದತೆ, ಸಹೋದರತ್ವ ಬೇಕು. ಸಂವಿಧಾನದಲ್ಲೇ ಭಾವೈಕ್ಯತೆ ಸಂದೇಶವಿದೆ'' ಎಂದರು.

ವೀರೈಶವ ಲಿಂಗಾಯತ ಧರ್ಮವನ್ನು ಸಿದ್ಧಲಿಂಗ ಶ್ರೀಗಳು ಒಡೆದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀ ಆರೋಪಕ್ಕೆ ಪ್ರತಿಕ್ರಿಯಿಸಿ, ''ವೀರಶೈವ ಎಂಬುದು ಲಿಂಗಾಯತದ ಒಂದು ಭಾಗ. 12ನೇ ಶತಮಾನದಲ್ಲೇ ಲಿಂಗಾಯತ ಧರ್ಮ ಇದೆ. ಅದನ್ನು ಒಡೆಯುವ ಪ್ರಮೇಯವೇ ಇಲ್ಲ. ಪ್ರತ್ಯೇಕ ಧರ್ಮ ಹೋರಾಟ ತಟಸ್ಥದ ಹಿಂದೆ ರಾಜಕಾರಣಿಗಳ ಹೊರಾಟವಿದೆ. ರಾಜಕಾರಣಿಗಳಿಗೆ ಮತ ಮುಖ್ಯ, ಸಿದ್ಧಾಂತವಲ್ಲ. ಈ ವಿಷಯ ಎಲ್ಲರಿಗೂ ಗೊತ್ತೆ ಇದೆ'' ಎಂದು ಸಿದ್ದರಾಮ ಶ್ರೀಗಳು ಹೇಳಿದರು. ಹಿಂದೂ ಎಂಬುದು ಬದುಕುವ ಪದ್ಧತಿ ವಿನಹ ಧರ್ಮವಲ್ಲ. ಹಿಂದೂ ಧರ್ಮಕ್ಕೆ ಸಂಸ್ಥಾಪಕರೇ ಇಲ್ಲ. ಭಾರತದಲ್ಲಿ ಇರುವರೆಲ್ಲ ಹಿಂದೂಗಳೇ ಎಂಬುದು ಅರಿತುಕೊಳ್ಳಬೇಕು'' ಎಂದು ತಿಳಿಸಿದರು.

ಇದನ್ನೂ ಓದಿ:ಮಗುವಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಆರೋಪ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟಿಸಿದ ಪೋಷಕರು

Last Updated : Feb 20, 2024, 1:17 PM IST

ABOUT THE AUTHOR

...view details