ಕರ್ನಾಟಕ

karnataka

ETV Bharat / state

ಬಳ್ಳಾರಿಗೆ ಸ್ಥಳಾಂತರ ವೇಳೆ ದರ್ಶನ್ ಕೂಲಿಂಗ್​ ಗ್ಲಾಸ್​ ಧರಿಸಿದ್ದ ವಿಚಾರ: ಕ್ರಮಕ್ಕೆ ಡಿಐಜಿ ಪತ್ರ - DIG Notice on Darshan Cooling glass - DIG NOTICE ON DARSHAN COOLING GLASS

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್​ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ಬಳ್ಳಾರಿ ಸೆಂಟ್ರಲ್​ ಜೈಲಿಗೆ ಸ್ಥಳಾಂತರಿಸಲಾಗಿದೆ. ಆದರೆ ಜೈಲಿಗೆ ಕರೆದೊಯ್ಯುವಾಗ ಅವರಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಅವಕಾಶ ನೀಡಿದ್ದಾರೆಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

darshan
ದರ್ಶನ್ (ETV Bharat)

By ETV Bharat Karnataka Team

Published : Aug 29, 2024, 1:53 PM IST

ಬೆಳಗಾವಿ:ಬಳ್ಳಾರಿ ಜೈಲಿಗೆ ಸ್ಥಳಾಂತರವಾಗುವ ವೇಳೆ ನಟ ದರ್ಶನ್​ ಕೂಲಿಂಗ್ ಗ್ಲಾಸ್ ಧರಿಸಿದ್ದ ವಿಚಾರವಾಗಿ, ಸಂಬಂಧಿಸಿದ ಬೆಂಗಾವಲು ಪೊಲೀಸ್ ಪಡೆ ವಿರುದ್ಧ ಶಿಸ್ತುಕ್ರಮಕ್ಕೆ ಕೋರಿ ರಾಜ್ಯ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಉತ್ತರ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ ಟಿ.ಪಿ ಶೇಷ ಅವರು ಜ್ಞಾಪನಾ ಪತ್ರ ಬರೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿ ಜೈಲಿಗೆ ತೆರಳುತ್ತಿರುವಾಗ ದರ್ಶನ್​ ಕೂಲಿಂಗ್​ ಗ್ಲಾಸ್​ ಧರಿಸಿರುವ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗಿದೆ. ಇದಕ್ಕೆ ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಯು ಅನುಮತಿಸಿರುವುದು ಕಂಡುಬಂದಿದೆ. ಇದರಿಂದಾಗಿ ದರ್ಶನ್​ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿರುವುದಾಗಿ ಸಾರ್ವಜನಿಕರು ಹಾಗೂ ರಾಜ್ಯದ ಜನತೆಗೆ ತಪ್ಪು ಕಲ್ಪನೆಗಳು ಬಿಂಬಿತವಾಗುತ್ತಿದೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಜ್ಞಾಪನಾ ಪತ್ರದಲ್ಲಿ ಡಿಐಜಿ ಟಿ.ಪಿ ಶೇಷ ತಿಳಿಸಿದ್ದಾರೆ.

ಬೆಂಗಾವಲಿಗೆ ನಿಯೋಜಿತರಾದ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಯು ದರ್ಶನ್​ ಅವರ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿಯೇ ಒಪ್ಪಿಸಬೇಕು. ಆದರೆ, ಸಿಬ್ಬಂದಿಯು ನಿಯಮಬಾಹಿರವಾಗಿ ಕೂಲಿಂಗ್​ ಗ್ಲಾಸ್​ ಧರಿಸಲು ಅನುಮತಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸೂಕ್ತ ಶಿಸ್ತುಕ್ರಮ ಜರುಗಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಕೋರುವ ಪತ್ರ ಬರೆದಿದ್ದಾರೆ.

ಡಿಐಜಿ ಜ್ಞಾಪನಾ ಪತ್ರ (ETV Bharat)

ಅಲ್ಲದೆ, ಬಳ್ಳಾರಿ ಜೈಲಿನಲ್ಲಿ ದರ್ಶನ್​ರನ್ನು ಹೇಗೆ ನೋಡಿಕೊಳ್ಳಬೇಕೆಂದು ಉತ್ತರ ವಲಯ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ‌.ಶೇಷ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ. ದರ್ಶನ್​ರನ್ನು ಪ್ರತ್ಯೇಕ ಕೊಠಡಿಯಲ್ಲಿರುವುದು, ಈ ಕೊಠಡಿಗೆ 24*7 ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಿಸಬೇಕು. ಪ್ರತಿನಿತ್ಯ ಸಿಸಿ ಕ್ಯಾಮರಾ ದೃಶ್ಯಾವಳಿ ಶೇಖರಿಸಬೇಕು. ದರ್ಶನ್​ ಇರುವ ಸೆಲ್‌ನ ಕರ್ತವ್ಯಕ್ಕೆ ಮುಖ್ಯವೀಕ್ಷಕ ಅಧಿಕಾರಿ ನಿಯೋಜಿಸಬೇಕು. ಈ ಸೆಲ್‌ಗೆ ಪ್ರತಿನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಹಾಕಬೇಕು ಹಾಗೂ ತೆರೆಯಬೇಕು. ಕರ್ತವ್ಯ ನಿರ್ವಹಿಸುವ ಮುನ್ನ ಪ್ರತಿನಿತ್ಯ ದರ್ಶನ ಸೆಲ್ ತಪಾಸಣೆ ಮಾಡಬೇಕು. ಸೆಲ್‌ಗೆ ನಿಯೋಜಿಸುವ ಸಿಬ್ಬಂದಿ ಬಾಡಿವಾರ್ನ್ ಕ್ಯಾಮರಾ ಧರಿಸಬೇಕು. ದರ್ಶನ ಭೇಟಿಗೆ ಧರ್ಮಪತ್ನಿ, ರಕ್ತಸಂಬಂಧಿ, ವಕಾಲತ್ತು ವಹಿಸಿದ ವಕೀಲರಿಗೆ ಭೇಟಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರ ಭೇಟಿಗೆ ಅವಕಾಶವಿಲ್ಲ. ಸಾಮಾನ್ಯ ಬಂಧಿಯಂತೆ ಪರಿಗಣಿಸಿ, ಸಾಮಾನ್ಯ ಬಂಧಿಗೆ ಕೊಡುವ ಸೌಲಭ್ಯ ಮಾತ್ರ ನೀಡಬೇಕು. ಜೈಲಿನಲ್ಲಿ ಬೇರೆ ಕೈದಿಗಳ ಜೊತೆಗೆ ದರ್ಶನ ಬೆರೆಯುವಂತಿಲ್ಲ, ಅಧಿಕಾರಿಗಳು ಸರ್ಪೈಸ್ ವಿಸಿಟ್ ಮಾಡಬೇಕು. ಕಾರಾಗೃಹ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಳ್ಳಾರಿ ಕಾರಾಗೃಹದ ಅಧಿಕ್ಷಕರಿಗೆ ಜ್ಞಾಪನಾ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಸೆಂಟ್ರಲ್​ ಜೈಲಿಗೆ ನಟ ದರ್ಶನ್​ ಸ್ಥಳಾಂತರ: ಹೈ-ಸೆಕ್ಯೂರಿಟಿ ಸೆಲ್​ಗೆ ಶಿಫ್ಟ್​ - Darshan shifted to Ballari Jail

ABOUT THE AUTHOR

...view details