ಹುಬ್ಬಳ್ಳಿ:ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಇಂದು ಮನೆಯಿಂದಲೇ ತಮ್ಮ ಮತ ಹಾಕಿದರು. ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ-72 ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿಯ ನವಅಯೋಧ್ಯನಗರದ ನಿವಾಸಿ ಹಿರಿಯ ನಾಗರಿಕ ಆತ್ಮಾರಾವ್ ಯಾದವಾಡ ಮತದಾನ ಮಾಡಿದರು. ಇವರ ವಿಶೇಷಚೇತನ ಮೊಮ್ಮಕ್ಕಳಾದ ಆದರ್ಶ ಹಾಗೂ ಸಂಪ್ರದಾ ಅವರು ಇದೇ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಿ ಖುಷಿಪಟ್ಟರು.
ಬಳಿಕ ಮಾತನಾಡಿದ ಆತ್ಮರಾವ್ ಯಾದವಾಡ, ನನಗೆ 87 ವರ್ಷ ವಯಸ್ಸಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ. ಇದರಿಂದಾಗಿ ಹಿರಿಯ ನಾಗರಿಕರು ಮತದಾನದಂದು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ. ನನ್ನ ಜೊತೆಗೆ ನನ್ನ ಮೊಮ್ಮಕ್ಕಳು ಸಹ ಮತ ಚಲಾಯಿಸಿರುವ ಖುಷಿ ಇದೆ. ಮನೆಯಿಂದ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಿರುವ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗಕ್ಕೆ ಧನ್ಯವಾದಗಳು ಎಂದರು.
ಮೊದಲ ಬಾರಿಗೆ ಮತ ಚಲಾಯಿಸಿದ ಸಂಪ್ರದಾ ಮತ್ತು ಆದರ್ಶ ಯಾದವಾಡ ಮಾತನಾಡಿ, ಇದೇ ಮೊದಲ ಬಾರಿಗೆ ಮತ ಚಲಾಯಿಸಲು ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ವಿಶೇಷಚೇತನರು ಸಹ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿ ಕೊಟ್ಟಿರುವುದು ಅನುಕೂಲವಾಗಿದೆ ಎಂದು ತಿಳಿಸಿದರು.