ಹಾವೇರಿ : ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಒಂದೇ ದಿನ 131 ಜ್ವರದ ರೋಗಿಗಳು ಕಂಡು ಬಂದಿದ್ದಾರೆ. ಅದರಲ್ಲಿ 31 ಜನರಿಗೆ ಶಂಕಿತ ಡೆಂಗ್ಯೂ ಇದೆ. ಒಬ್ಬರಿಗೆ ಡೆಂಗ್ಯೂ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇದೀಗ ಎಲ್ಲಿ ನೋಡಿದರಲ್ಲಿ ಬೆಡ್ ಕಾಣಿಸುತ್ತಿವೆ. ಆಸ್ಪತ್ರೆಯ ವಾರ್ಡ್‌ಗಳಲ್ಲಿರುವ ಬೆಡ್ಗಳು ರೋಗಿಗಳಿಂದ ತುಂಬಿದ್ದರೂ ಸಹ ಕಾರಿಡಾರ್ಗಳಲ್ಲಿ ಬೆಡ್ ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲೂ ಮುಂಗಾರು ಆರಂಭವಾಯಿತು ಎಂದರೆ ಸಾಕು ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಧಿಕ ಜನ ಜ್ವರದಿಂದ ಬಳಲುತ್ತಿದ್ದಾರೆ.
ಈ ಕುರಿತು ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ್ ಅವರು ಮಾತನಾಡಿ, ಜ್ವರದಿಂದಾಗಿ ಆಸ್ಪತ್ರೆಗೆ ನೂರಾರು ರೋಗಿಗಳು ಆಗಮಿಸುತ್ತಿದ್ದಾರೆ. ಅವರ ರೋಗಲಕ್ಷಣ ತಪಾಸಣೆ ಮಾಡಿ ಡೆಂಗ್ಯೂ ಲಕ್ಷಣಗಳಿದ್ದರೆ ಅವರಿಗೆ ಎನ್‌ಎಸ್ಒನ್ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲೂ ಸಹ ಡೆಂಗ್ಯೂ ಪಾಸಿಟಿವ್ ತೋರಿಸಿದರೆ ಅವರನ್ನ ಶಂಕಿತ ಡೆಂಗ್ಯೂ ರೋಗಿಗಳು ಎಂದು ಗುರುತಿಸಲಾಗುತ್ತದೆ. ಎನ್ಎಸ್ಒನ್ನಲ್ಲಿ ಸಹ ಪಾಸಿಟಿವ್ ಬಂದ ನಂತರ ಎಲಿಸಾ ಟೆಸ್ಟ್ ಮಾಡಲಾಗುತ್ತದೆ. ಎಲಿಸಾದಲ್ಲಿ ಪಾಸಿಟಿವ್ ಬಂದರೆ ಅದಕ್ಕೆ ಡೆಂಗ್ಯೂ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆಗೆ ನಿತ್ಯ 300ಕ್ಕೂ ಅಧಿಕ ಹೊರರೋಗಿಗಳು ಆಗಮಿಸುತ್ತಾರೆ. ಅವರಲ್ಲಿ ನೂರಕ್ಕೂ ಅಧಿಕ ಜನರು ಜ್ವರದಿಂದ ಬಳಲುತ್ತಿರುತ್ತಾರೆ. ಅವರಲ್ಲಿ ಡೆಂಗ್ಯೂ ರೋಗಲಕ್ಷಣಗಳು ಇದ್ದರೆ ಮಾತ್ರ ಅವರಿಗೆ ಎನ್‌ಎಸ್ಒನ್ ಟೆಸ್ಟ್ ಮಾಡಿಸುತ್ತೇವೆ. ಎನ್‌ಎಸ್ಒನ್ ಪಾಸಿಟಿವ್ ಬಂದರೆ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡುತ್ತೇವೆ. ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತೇವೆ ಎಂದರೆ ಕಳಿಸುತ್ತೇವೆ ಎಂದಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸುತ್ತೇವೆ: ಎನ್‌ಎಸ್ಒನ್ ನಂತರ ಎಲಿಸಾ ಟೆಸ್ಟ್ ಮಾಡಿಸಿದಾಗ ಅಲ್ಲಿ ಪಾಸಿಟಿವ್ ಬಂದಾಗ ಮಾತ್ರ ಅದನ್ನ ಡೆಂಗ್ಯೂ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಡೆಂಗ್ಯೂ ರೋಗಿಗಳನ್ನು ಒಳರೋಗಿಗಳಾಗಿ ಸೇರಿಸಿಕೊಂಡು ಚಿಕಿತ್ಸೆ ನೀಡುತ್ತೇವೆ. ಅವರ ಪ್ಲೇಟ್ಲೆಟ್ ಕಡಿಮೆಯಾದರೆ ಇಲ್ಲಿ ಪ್ಲೇಟ್ಲೆಟ್ ಹಾಕುವ ಸೌಲಭ್ಯ ಇಲ್ಲದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮತ್ತು ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದೇವೆ ಎಂದು ಹಾವನೂರು ತಿಳಿಸಿದ್ದಾರೆ.