ದಾವಣಗೆರೆ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವಮಳೆಯಿಂದರಾಮಕೃಷ್ಣ ಹೆಗಡೆ ನಗರದ ನಿವಾಸಿಗಳ ಜೀವನ ಅಯೋಮಯವಾಗಿದೆ. ಎಲ್ಲ ಸೌಲಭ್ಯಗಳನ್ನು ಕೊಡುವುದಾಗಿ ಈ ಮೊದಲು ಭರವಸೆ ನೀಡಿ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮದ ಸರ್ವೇ ನಂಬರ್ 54ಕ್ಕೆ ಸ್ಥಳಾಂತರ ಮಾಡಿದ ಜಿಲ್ಲಾಡಳಿತ ಆ ಬಳಿಕ, ಸೌಲಭ್ಯಗಳನ್ನು ನೀಡುವಲ್ಲಿ ಯಡವಿದೆ. ಪರಿಣಾಮ ಮಳೆಯಿಂದ ನಮ್ಮ ಜೀವನ ಅಯೋಮಯವಾಗಿದೆ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಳೆಯಿಂದ ನಿವಾಸಿಗಳ ಬಾಳು ಸರ್ವನಾಶವಾಗಿದೆ. ಪಾಲಿಕೆ ವತಿಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಶೆಡ್ಡ್, ಶೀಟ್ ಭಾರೀ ಗಾಳಿ-ಮಳೆಯಿಂದ ಹಾರಿ ಹೋಗಿವೆ. ಮನೆಗಳು ನೆಲಕ್ಕುರುಳಿವೆ. ಜನರ ಬದುಕು ಬೀದಿಪಾಲಾಗಿದೆ. ತಾಲೂಕಿನ ದೊಡ್ಡಬಾತಿ ಗ್ರಾ.ಪಂ ಸರ್ವೇ ನಂ. 54ರ ಯರಗುಂಟೆ ಬಳಿ ಒಟ್ಟು 450 ಮನೆಗಳನ್ನು ಪಾಲಿಕೆ ಈ ಹಿಂದೆಯೇ ಮಂಜೂರು ಮಾಡಿತ್ತು. ಜಿಲ್ಲಾಡಳಿತ ಹೇಳಿದಂತೆ ನಿವಾಸಿಗಳನ್ನು ರಾಮಕೃಷ್ಣ ಹೆಗಡೆ ನಗರದಿಂದ ಸರ್ವೇ ನಂ. 54 ಜಮೀನಿಗೆ ಸ್ಥಳಾಂತರ ಮಾಡಲಾಗಿತ್ತು.
ಕಳೆದ ಆರು ತಿಂಗಳ ಹಿಂದೆ ರಿಂಗ್ ರಸ್ತೆ ಅಗಲೀಕರಣ ನಿಮಿತ್ತ ಇಡೀ ರಾಮಕೃಷ್ಣ ಹೆಗಡೆ ನಿವಾಸಿಗಳನ್ನು ಮೂಲಸೌಕರ್ಯಗಳನ್ನು ಕೊಡಲಾಗುತ್ತದೆ ಎಂದು ನಿವೇಶನ ಮಂಜೂರು ಮಾಡಿ ಸ್ಥಳಾಂತರ ಮಾಡಲಾಗಿತ್ತು. ಆದರೆ, ಸ್ಥಳಾಂತರ ಮಾಡಿ ಆರು ತಿಂಗಳು ಉರುಳಿದರು ಕೂಡ ಚರಂಡಿ, ನೀರು, ಶೌಚಾಲಯ, ಮನೆ ನಿರ್ಮಾಣ ಮಾಡುವಲ್ಲಿ ಪಾಲಿಕೆಯ ಅಧಿಕಾರಿಗಳು ಯಡವಿದ್ದಾರೆ. ಇದರಿಂದ ನಿವಾಸಿಗಳಿಗೂ ಜಿಲ್ಲಾಡಳಿತಕ್ಕೂ ಸಂಬಂಧವೇ ಇಲ್ಲ ಎಂಬಂತೆ ಬದುಕಲಾಗುತ್ತದೆ. ಮೂಲಸೌಕರ್ಯಕ್ಕಾಗಿ ಅಂಗಲಾಚಿ ಬೇಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಇತ್ತ ಬಂದಿರುವ ಉದಾಹರಣೆ ಇಲ್ಲ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.