ಕರ್ನಾಟಕ

karnataka

ETV Bharat / state

ಬಾಣಂತಿಯರ ಸಾವು ತಡೆಯಲು ವಿಫಲ: ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಒತ್ತಾಯ - DEMAND FOR MINISTERS RESIGNATION

ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಾಣಂತಿಯರ ಸಾವು ತಡೆಯಲು ವಿಫಲರಾಗಿದ್ದು, ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ (ETV Bharat)

By ETV Bharat Karnataka Team

Published : Jan 1, 2025, 8:45 PM IST

ಬೆಂಗಳೂರು: ಬಾಣಂತಿಯರ ಸಾವನ್ನು ತಡೆಯಲು ವಿಫಲವಾದ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬಾಣಂತಿಯರ ಸಾವನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರು ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲ್ಲಿವರೆಗೆ ಬಾಣಂತಿ ಸಾವಿನ ಸಂಬಂಧ ಒಬ್ಬರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಅವರು ಕೂಡ ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು" ಎಂದು ಆಗ್ರಹಿಸಿದರು.

"ಬಾಣಂತಿಯರ ಸಾವನ್ನು ಸರ್ಕಾರ ನಿಲ್ಲಿಸದೇ ಇರುವುದನ್ನು ಖಂಡಿಸಿ ಇಡೀ ರಾಜ್ಯದಲ್ಲಿ, ಪ್ರತಿದಿನ 5 ಜಿಲ್ಲೆಗಳಲ್ಲಿ ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾ ಘಟಕಗಳು ನಾಳೆಯಿಂದ ಪ್ರತಿಭಟನೆ ನಡೆಸಲಿವೆ. ಇದೊಂದು ಲಜ್ಜೆಗೆಟ್ಟ ಸರ್ಕಾರ. ಇಲ್ಲಿನವರೆಗೆ ಯಾವುದೇ ಸಚಿವರು ತೆರಳಿ ಭೇಟಿ ಮಾಡುತ್ತಿಲ್ಲ" ಎಂದು ಕಿಡಿಕಾರಿದರು.

"ಮೃತ ಪ್ರತಿ ಬಾಣಂತಿಯರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು. ಮಕ್ಕಳನ್ನು ಈ ಸರ್ಕಾರ ದತ್ತು ಸ್ವೀಕಾರ ಮಾಡಿ, ಅವರಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಭದ್ರತೆ ಕೊಡಬೇಕು. ಕರ್ನಾಟಕದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೊಸ ವರ್ಷದಲ್ಲಿ ರಾಜ್ಯದ ಮಹಿಳೆಯರಿಗೆ ಬಾಣಂತಿಯರ ಸಾವಿನ ಗ್ಯಾರಂಟಿ ಕೊಟ್ಟಿದೆ" ಎಂದು ಟೀಕಿಸಿದರು.

"ನಿನ್ನೆ ಕೊಪ್ಪಳದಲ್ಲಿ ಗರ್ಭಿಣಿ ರೇಣುಕಾ ಹಿರೇಮನಿ ಎಂಬವರು ಸಾವನ್ನಪ್ಪಿದ್ದಾರೆ. ಮೊದಲನೇ ಹೆರಿಗೆ ಸಂಬಂಧ ಕುಷ್ಟಗಿಯ ತವರು ಮನೆಗೆ ಬಂದಿದ್ದ 23 ವರ್ಷದ ರೇಣುಕಾ ಅವರು, ಕುಷ್ಟಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಇದೇನಾ ಸಿದ್ದರಾಮಯ್ಯ ಅವರ ಸರ್ಕಾರದ ಸಾವಿನ ಗ್ಯಾರಂಟಿ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ ಆರೋಪ: 13 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್

ABOUT THE AUTHOR

...view details