ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಭತ್ತ ಕಟಾವು ಯಂತ್ರಕ್ಕೆ ಡಿಮ್ಯಾಂಡ್​​​: ಭತ್ತದ ದರ ಕುಸಿತ, ಅನ್ನದಾತನ ಆಕ್ರೋಶ - PADDY HARVESTING MACHINE DEMAND

ಗೊಬ್ಬರ, ಕೂಲಿಯಾಳು ದರ ಏರಿಕೆಯಾಗಿದ್ದು ಜತೆಗೆ ಮಳೆಯಿಂದ ಬೆಳೆ ನಾಶವಾಗುತ್ತಿದೆ. ಈ ಎಲ್ಲಾ ಕಾರಣದಿಂದ ರೈತರು ಭತ್ತ ಕಟಾವು ಯಂತ್ರದ ಮೊರೆ ಹೋಗಿದ್ದಾರೆ. 'ಈಟಿವಿ ಭಾರತ' ಪ್ರತಿನಿಧಿ ಕಿರಣ್ ಮಾಡಿರುವ​ ವಿಶೇಷ ವರದಿ ಇಲ್ಲಿದೆ.

PADDY CUTTING MACHINE  SHIVAMOGGA  ಭತ್ತ ಕಟಾವು ಯಂತ್ರ  ಭತ್ತ ಬೆಲೆ ಕುಸಿತ
ಮಲೆನಾಡಿನಲ್ಲಿ ಭತ್ತ ಕಟಾವು ಯಂತ್ರಕ್ಕೆ ಡಿಮ್ಯಾಂಡ್​​: ಬೆಲೆ ಕುಸಿತ, ಅನ್ನದಾತನ ಆಕ್ರೋಶ (ETV Bharat)

By ETV Bharat Karnataka Team

Published : Dec 11, 2024, 10:37 AM IST

ಶಿವಮೊಗ್ಗ: ಮಲೆನಾಡಿನ ನೀರಾವರಿ ಆಶ್ರಿತ ಪ್ರದೇಶದಲ್ಲಿ ಭತ್ತದ ಕಟಾವು ಜೋರಾಗಿದೆ. ಆದರೆ ಸೈಕ್ಲೋನ್​​ ರೈತರ ಆತಂಕಕ್ಕೆ ಕಾರಣವಾಗಿದೆ. ಐದಾರು ತಿಂಗಳು ಶ್ರಮದಿಂದ ಬೆಳೆದ ಭತ್ತ ಮಳೆಗೆ ಸಿಲುಕಿ ಮಣ್ಣು ಪಾಲಾಗುತ್ತಿದೆ. ಇದರಿಂದ ಭತ್ತ ಕಟಾವು ಯಂತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ.

ಭತ್ತದ ಕಟಾವು ಯಂತ್ರದಲ್ಲಿ ಎರಡು ವಿಧವಿದೆ. ಮೊದಲನೆಯದು ಟೈರ್​​ ಯಂತ್ರ, ಇನ್ನೊಂದು ಚೈನ್​ ಯಂತ್ರ. ಮಳೆ ಬಂದು ಸ್ವಲ್ಪ ನೀರು ನಿಂತರು ಸಹ ಅಲ್ಲಿಗೆ ಟೈರ್​​​ ಕಟಾವು ಯಂತ್ರ ಹೋಗುವುದಿಲ್ಲ. ಇದರಿಂದ ಟೈರ್​​​ ಯಂತ್ರಕ್ಕಿಂತ ಚೈನ್​ ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಟೈರ್​ ಯಂತ್ರಕ್ಕೆ ಗಂಟೆಗೆ 2,200 ರೂ. ಇದೆ. ಚೈನ್​ ಯಂತ್ರಕ್ಕೆ 2,600 ರಿಂದ 2,800 ರೂ. ಇದೆ. ಈ ಯಂತ್ರವು ಒಂದು ಎಕರೆಯನ್ನು ಕಟಾವು ಮಾಡಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಭತ್ತ ಕಟಾವು ಮಾಡಿ, ಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸಿ ನೀಡುತ್ತದೆ. ಈ ಎಲ್ಲಾ ಯಂತ್ರಗಳು ತಮಿಳುನಾಡಿನಿಂದ ಬರುತ್ತವೆ.

ಮಲೆನಾಡಿನಲ್ಲಿ ಭತ್ತ ಕಟಾವು ಯಂತ್ರಕ್ಕೆ ಡಿಮ್ಯಾಂಡ್​​​: ಭತ್ತದ ದರ ಕುಸಿತ, ಅನ್ನದಾತನ ಆಕ್ರೋಶ (ETV Bharat)

ಶಿವಮೊಗ್ಗ ತಾಲೂಕಿನ ಹೊನ್ನಾಳಿ ರಸ್ತೆಯ ಎಲ್ಲಾ ಗ್ರಾಮಗಳಿಗೆ ಜೀವಣ್ಣ ಎಂಬುವರು ಯಂತ್ರವನ್ನು ಕಟಾವಿಗೆ ಕಳುಹಿಸಿಕೊಡುತ್ತಾರೆ. ಹವಾಮಾನ ಇಲಾಖೆಯು ಮಳೆ ಬರುವ ಮುನ್ಸೂಚನೆ ನೀಡಿರುವ ಕಾರಣದಿಂದ ರೈತರು ಭತ್ತ ಕಟಾವು ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಆತುರದಲ್ಲಿ ಇದ್ದಾರೆ. ಇವರಿಗೆ ಭತ್ತ ಕಟಾವು ಯಂತ್ರ ಒಂದು ರೀತಿಯಲ್ಲಿ ಸಹಾಯಕವಾಗಿದೆ. ಆದರೆ ಜಾನುವಾರುಗಳಿಗೆ ಹುಲ್ಲು ಸರಿಯಾದ ಪ್ರಮಾಣದಲ್ಲಿ ಇಲ್ಲಿ ಲಭ್ಯವಾಗುವುದಿಲ್ಲ. ಈಗ ಭತ್ತದ ಹುಲ್ಲನ್ನು ಕಟ್ಟುವ ಯಂತ್ರ ಸಹ ಬಂದಿದೆ.

ಭತ್ತದ ಬೆಲೆ ಕುಸಿತ, ಅನ್ನದಾತನ ಆಕ್ರೋಶ: ರೈತ ಐದಾರು ತಿಂಗಳು ಕಷ್ಟಪಟ್ಟು ಬೆಳೆದ ಭತ್ತವನ್ನು ಕಟಾವು ಮಾಡುವ ಸಮಯಕ್ಕೆ ಚಂಡಮಾರುತ, ಮಳೆ ಬಂದು ರೈತ ಶ್ರಮದ ಫಲವನ್ನು‌‌ ನೆಲಸಮ ಮಾಡುತ್ತಿದೆ. ಭತ್ತವನ್ನು ಕಟಾವು ಮಾಡಿ ಮಿಲ್​ಗೆ ತೆಗೆದುಕೊಂಡು ಹೋದರೆ ಭತ್ತಕ್ಕೆ ಸೂಕ್ತ ಬೆಲೆ ದೊರಕುತ್ತಿಲ್ಲ. ಸಣ್ಣ ಭತ್ತಕ್ಕೆ ಮಾರುಕಟ್ಟೆಯಲ್ಲಿ 2,200 ರೂ. ಇದೆ. ಒಂದು ಎಕರೆ ಭತ್ತ ಬೆಳೆಯಲು ರೈತನಿಗೆ ಕನಿಷ್ಟ 30 ಸಾವಿರ ರೂ. ಬೇಕಾಗಿದೆ. ಬೀಜ, ಗೊಬ್ಬರ, ಕೂಲಿಯಾಳುಗಳು ಎಲ್ಲವು ಸಹ ದುಬಾರಿಯಾಗಿದೆ. ಹೀಗಾಗಿ ಭತ್ತ ಬೆಳೆಯುವವರ ಪ್ರದೇಶ ಕಡಿಮೆಯಾಗಿ, ಅಡಕೆ ಕಡೆ ರೈತರು ಮುಖ ಮಾಡುತ್ತಿದ್ದಾರೆ. ಭತ್ತವನ್ನು ನಾಟಿ ಮಾಡಲು, ಕಳೆ ತೆಗೆಯಲು ಜನ ಸಿಗುತ್ತಾರೆ. ಆದರೆ ಭತ್ತದ ಕಟಾವಿಗೆ ಜನ ಸಿಗದ ಕಾರಣಕ್ಕೆ ರೈತರು ಭತ್ತ ಕಟಾವು ಯಂತ್ರದ ಮೇಲೆ ಅವಲಂಬಿತವಾಗಿದ್ದಾರೆ.

ಭತ್ತಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಲು ಒತ್ತಾಯ: ಭತ್ತಕ್ಕೆ ಈಗ ದರ ಕುಸಿತವಾಗಿದೆ. ರೈತರ ಬಳಿ ಭತ್ತ ಇದ್ದಾಗ ದರ ಕಡಿಮೆ ಇದೆ. ಅದೇ ರೈತರ ಬಳಿ ಭತ್ತ ಇಲ್ಲದೆ ಹೋದಾಗ ಸರ್ಕಾರ ಬೆಂಬಲ ಬೆಲೆ ಘೋಷಿಸುತ್ತದೆ. ಇದು ರೈತರಿಗೆ ಅನುಕೂಲವಾಗುವಂತೆ ರೈತರ ಬಳಿ ಭತ್ತ ಇದ್ದಾಗಲೇ ಬೆಂಬಲ ಬೆಲೆ ಘೋಷಿಸಬೇಕು. ಭತ್ತವನ್ನು ಸರ್ಕಾರಗಳು ಎಂಎಸ್​ಪಿಯಲ್ಲಿ ಖರೀದಿ ಮಾಡಬೇಕು. ದಲ್ಲಾಳಿಗಳಿಗೆ ಅನುಕೂಲವಾಗುವಂತೆ ದರ ಏರಿಕೆ‌ ಮಾಡಬಾರದು ಎಂದು ರೈತರು ಆಗ್ರಹಿಸಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆಯ ಕುರಿತು ಶಿವಮೊಗ್ಗ ತಾಲೂಕು ಹೊಳೆಹನಸವಾಡಿಯ ರೈತ ಶಿವಾನಂದಪ್ಪ ಅವರು ಈಟಿವಿ ಭಾರತ್​ ಜೊತೆ ಮಾತನಾಡಿ, "ಕಳೆದ 10 ವರ್ಷಗಳ ಹಿಂದೆ ಕೃಷಿ‌ ಕೂಲಿ ಕಾರ್ಮಿಕರು ಸಿಗುತ್ತಿದ್ದರು. ನಗರ ಬೆಳೆದಂತೆ ಹೋಟೆಲ್, ಆಸ್ಪತ್ರೆ, ಗಾರ್ಮೆಂಟ್ಸ್​​ಗೆ ಹೋಗಲು ಪ್ರಾರಂಭಿಸಿದ್ದಾರೆ. ಇಲ್ಲಿ ಕೆಸರು ತುಳಿದು ಈ ಕೆಲಸ ಮಾಡಲು ಯಾರೂ ರೆಡಿ ಇಲ್ಲ. ಇದರಿಂದ ರೈತರು ಯಂತ್ರಗಳ ಮೇಲೆ ಅವಲಂಬನೆಯಾಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಈಗ ಭತ್ತ ಕಟಾವು ಮಾಡುವ ಮಷಿನ್​ಗೆ ಪ್ರತಿ ಗಂಟೆಗೆ 2,600 ರೂ. ನೀಡಬೇಕಿದೆ.‌ ಭತ್ತ ಬೆಳೆಯುವುದು, ಅದನ್ನು‌ ಮಿಲ್​ಗೆ ಕಳುಹಿಸುವುದು ಸಹ ಅಷ್ಟೇ ದುಬಾರಿಯಾಗಿದೆ" ಎಂದರು.‌

ಯುವ ರೈತ ನಂದೀಶ್ ಮಾತನಾಡಿ, "ಭತ್ತ ಕಟಾವಿಗೆ ಬಂದಿದೆ. ಮೊದಲಿನಂತೆ ಈಗ ಇಲ್ಲ. ಗೊಬ್ಬರ, ಕೂಲಿಯಾಳು ದರ ಎಲ್ಲವೂ ಸಹ ಏರಿಕೆಯಾಗಿದೆ. ಈಗ ಕಟಾವಿಗೆ ಜನರನ್ನು ಕರೆತಂದು ಕೆಲಸ ಮಾಡಲು ಆಗಲ್ಲ. ಈಗ ಕೊಯ್ಲು ಮಾಡಲು ಏನಿದ್ದರು ಯಂತ್ರ ಬೇಕಿದೆ.‌ ಭತ್ತದ ಹುಲ್ಲನ್ನು‌ ಪೆಂಡಿ ಕಟ್ಟಲು ಸಹ ಯಂತ್ರ ಬಂದಿವೆ. ಮೊದಲು ಹುಲ್ಲಿನ ಪೆಂಡಿ‌ ಕಟ್ಟಲು‌ 25 ರೂ. ಇತ್ತು. ಈಗ 35 ರೂ. ಆಗಿದೆ. ಮುಂಚೆ ದೊಡ್ಡ ಹುಲ್ಲಿನ ಪೆಂಡಿ ಕಟ್ಟುತ್ತಿದ್ದರು. ಈಗ ಪೆಂಡಿಯನ್ನು ಸಣ್ಣದಾಗಿ ಮಾಡಿ ಕಟ್ಟಿ‌ ಹಣ ಪಡೆಯುತ್ತಿದ್ದಾರೆ".

"ಮೇವಿಗಾಗಿ ಹುಲ್ಲನ್ನು ಶೇಖರಣೆ ಮಾಡುವುದು ಕಷ್ಟವಾಗಿದೆ. ರಕ್ಷಣೆಗಾಗಿ ಟಾರ್ಪಲ್ ಹಾಕಬೇಕಾದ ಅನಿವಾರ್ಯತೆ ಬಂದಿದೆ. ಸೋನಾ ಮಸೂರಿ ಸಣ್ಣ ಭತ್ತದ ದರ ಕ್ವಿಂಟಾಲ್​ಗೆ 2,300 ರೂ. ದರ ಇದೆ. ದರ ಹೆಚ್ಚಾಗುವವರೆಗೂ ಕಾದು ಮಾರಾಟ ಮಾಡುವ ಶಕ್ತಿ ನಮ್ಮಂತಹ ರೈತರಿಗೆ ಇಲ್ಲ.‌ ಪಿಗ್ಮಿ ಕಟ್ಟಿ ಆರು ತಿಂಗಳಿಗೊಮ್ಮೆ ಬಿಡಿಸಿಕೊಳ್ಳುವಂತೆ ರೈತರು ಭತ್ತ ಬೆಳೆಯುತ್ತಿದ್ದಾರೆ. ಇದೇ ರೀತಿ ದರ ಕುಸಿತವಾಗುತ್ತಿದ್ದರೆ ರೈತರು ಭತ್ತ ಬೆಳೆಯುವುದನ್ನೇ ಬಿಡುತ್ತಾರೆ. ಮುಂದೆ ಸರ್ಕಾರವೇ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ"ಎಂದು ತಮ್ಮ ಕಷ್ಟವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ:ಫೆಂಗಲ್​ ಚಂಡಮಾರುತದ ಎಫೆಕ್ಟ್​: ದಾವಣಗೆರೆಯಲ್ಲಿ ಅರ್ಧಕ್ಕೆ ನಿಂತ ಭತ್ತದ ಕಟಾವು

ABOUT THE AUTHOR

...view details