ಬೆಂಗಳೂರ: ಇತ್ತೀಚೆಗೆ ನಕ್ಸಲ್ ಚಳವಳಿಯಲ್ಲಿ ಭಾಗಿಯಾದ ವಿಕ್ರಂ ಗೌಡ ಅವರನ್ನು ಕೊಂದಿರುವುದು ನಕಲಿ ಎನ್ಕೌಂಟರ್ ಆಗಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ನಕ್ಸಲ್ ಚಳವಳಿಯಿಂದ ಹೊರ ಬಂಧಿರವ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಆಗ್ರಹಿಸಿದರು.
ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕ್ರಂ ಗೌಡ ಹತ್ಯೆ ಮಾಡಿರುವುದರಿಂದ ಹಲವು ಸಂಶಯಗಳಿವೆ. ಈ ಕೃತ್ಯದ ಹಿಂದೆ ಪೊಲೀಸ್ ಇಲಾಖೆ ಕೈವಾಡ ಇರುವ ಸಂಶಯ ಇದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸದಿದ್ದಲ್ಲಿ ಮೃತರಾದ ವಿಕ್ರಂ ಗೌಡ ಹತ್ಯೆಯಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರುವ ಸಂಶಯಕ್ಕೆ ಕಾರಣವಾಗಲಿದೆ ಎಂದರು.
ಮಲೆಕುಡಿಯ ಆದಿವಾಸಿ ಕುಟುಂಬಕ್ಕೆ ಸೇರಿದ ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡರ ಹತ್ಯೆಯಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮಲೆನಾಡಿನಲ್ಲಿ ಪೊಲೀಸರ ಓಡಾಟ–ಆರ್ಭಟ ಮತ್ತೆ ಹೆಚ್ಚಾಗಿದ್ದು, ಜನಸಾಮಾನ್ಯರ ಮನದಲ್ಲಿ ಆತಂಕದ ಮೋಡಗಳು ಕವಿಯುವಂತಾಗಿದೆ. ಕಗ್ಗತ್ತಲ ರಾತ್ರಿಯಲ್ಲಿ, ಕಾಡಿನ ಒಡಲಲ್ಲಿ ಚಿಮ್ಮಿದ ಆದಿವಾಸಿ ಯುವಕನ ನೆತ್ತರ ಹನಿಗಳು ಗೃಹಮಂತ್ರಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಳಿಯಂಗಿಗಳ ಮೇಲೂ ಬಿದ್ದಂತಿದೆ. ಹೀಗಾಗಿ ಸತ್ಯಾಂಶ ಹೊರಬರಬೇಕಾಗಿದ್ದು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಶಾಂತವಾಗಿದ್ದು, ಇದೀಗ ಕರಾವಳಿಯಲ್ಲಿ ಗುಂಡಿನ ಸದ್ದು ಆರ್ಭಟಿಸಿದೆ. ವಿಕ್ರಂ ಗೌಡ ಮತ್ತು ತಂಡ ಪೊಲೀಸರ ಮೇಲೇನೂ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಕನಿಷ್ಟ ಬೆದರಿಸಿಯೂ ಇರಲಿಲ್ಲ, ಏನನ್ನೂ ಸುಟ್ಟಿರಲೂ ಇಲ್ಲ. ಹಾಗಿದ್ದಾಗ ಕೊಲ್ಲುವ ಅಗತ್ಯವಾದರೂ, ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದಕೂ ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಲು ಲೈಸೆನ್ಸನ್ನು ನಿಮಗೆ ಕೊಟ್ಟವರು ಯಾರು? ಎಂದು ಪೊಲೀಸ್ ಇಲಾಖೆಯನ್ನು ಅವರು ಪ್ರಶ್ನಿಸಿದದರು.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ನಿವೃತ್ತ ನ್ಯಾಯಾಧೀಶರೊಬ್ಬರ ಮೇಲುಸ್ತುವಾರಿಯಲ್ಲಿ, ತಕ್ಷಣ ಘಟನೆಯ ಕುರಿತು ಕೂಲಂಕೂಷ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.