ಹುಬ್ಬಳ್ಳಿ:ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಉತ್ತಮವಾಗಿ ಹೆಸರುಕಾಳು ಬೆಳೆಯಲಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಖರೀದಿ ಕೇಂದ್ರಗಳನ್ನೂ ತೆರೆಯಲಾಗಿದೆ. ಆದರೆ ತಿಂಗಳು ಕಳೆಯುತ್ತಾ ಬಂದರೂ ಖರೀದಿ ಪ್ರಕ್ರಿಯೆ ಶುರುವಾಗದೇ ಬೆಳೆಗಾರರು ನೂರೆಂಟು ತೊಂದರೆ ಎದುರಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಕ್ವಿಂಟಲ್ ಹೆಸರುಕಾಳಿಗೆ 8,682 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಅದಕ್ಕನುಗುಣವಾಗಿ ರಾಜ್ಯ ಸರ್ಕಾರ ಕಳೆದ ತಿಂಗಳು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೂ ನೋಂದಣಿ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಕಾಳು ಖರೀದಿ ಮಾಡುತ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಮೊರಬ, ಆರೇಕುರಹಟ್ಟಿ, ಬ್ಯಾಹಟ್ಟಿ, ನೂಲ್ವಿ ಸೇರಿ 20 ಕೇಂದ್ರಗಳಲ್ಲಿ ಈವರೆಗೆ 4,123 ರೈತರು ಹೆಸರುಕಾಳು ಖರೀದಿಗೆ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಖರೀದಿ ಕೇಂದ್ರಕ್ಕೆ ಹೆಸರುಕಾಳು ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಬೆಳೆಗಾರರು ಫಸಲು ಮನೆಯಲ್ಲಿ ಇಟ್ಟುಕೊಳ್ಳಲೂ ಆಗದೇ, ಮಾರಾಟ ಮಾಡಲೂ ಆಗದೇ ಸಂಕಷ್ಟ ಎದುರಿಸುತ್ತಿರುವುದಾಗಿ ರೈತರು ಹೇಳುತ್ತಿದ್ದಾರೆ.
ಈ ಕುರಿತಂತೆ ರೈತ ಮುಖಂಡ ಶಿವಣ್ಣ ಹುಬ್ಬಳ್ಳಿ ಪ್ರತಿಕ್ರಿಯಿಸಿ, "ಅಧಿಕಾರಿಗಳಿಗೆ ರೈತರ ಕಷ್ಟ ಗೊತ್ತಾಗುತ್ತಿಲ್ಲ. ಕಳೆದ ಒಂದು ತಿಂಗಳಿಂದ ನಿರಂತರ ಮಳೆಯಿಂದಾಗಿ ಹೆಸರು ಕಾಳು ಒಣಗಿಸಲು ರೈತರಿಗೆ ತೊಂದರೆಯಾಗಿದೆ. ಅದರ ಜೊತೆಗೆ ಈಗ ಜಿಲ್ಲೆಯಲ್ಲಿ 20 ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ ಅಂತ ಹೇಳಿದ್ದಾರೆ. ರೈತರು ಹೆಸರು ಕೂಡ ನೋಂದಣಿ ಮಾಡಿದ್ದಾರೆ. ಹೆಸರು ನೋಂದಣಿ ಮಾಡಿಕೊಂಡು ಇಪ್ಪತ್ತು ದಿನಗಳಾದರೂ ಒಂದು ಕ್ವಿಂಟಲ್ ಹೆಸರುಕಾಳನ್ನೂ ಖರೀದಿಸಿಲ್ಲ. ಈಗಾಗಲೇ ಸಣ್ಣ ಸಣ್ಣ ರೈತರು ಖರ್ಚು ನೀಗಿಸಲು 6,000, 7,000 ಹಾಗೂ 7,500ಕ್ಕೆ ಮಾರಾಟ ಮಾಡಿದ್ದಾರೆ. ದೊಡ್ಡ ರೈತರು ಮಾತ್ರ ಇಟ್ಟುಕೊಂಡಿದ್ದಾರೆ. ಸಣ್ಣ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇವರು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ರೆ ರೈತರು ತಮಗೆ ಬೇಕಾದಲ್ಲಿ ಮಾರಾಟ ಮಾಡುತ್ತಿದ್ದರು. ಮುಂದಾದರೂ ಸರ್ಕಾರ ಕೂಡಲೇ ಖರೀದಿ ಪ್ರಾರಂಭ ಮಾಡಿ ರೈತರ ಖಾತೆಗೆ ಹಣ ಹಾಕುವ ಕೆಲಸ ಮಾಡಬೇಕು" ಎಂದು ಒತ್ತಾಯಿಸಿದರು.