ಮೈಸೂರು:ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿಂಕೆಗಳ ಸಂತತಿ ಹೆಚ್ಚಾಗಿದೆ. ಈ ಹಿನ್ನೆಲೆ ಸುಮಾರು 40 ಚುಕ್ಕಿ ಜಿಂಕೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಶೇಷ ರೀತಿಯ ಟ್ರಕ್ಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಶತಮಾನೋತ್ಸವ ಕಂಡಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿಂಕೆಗಳ ಸಂತತಿ ಕೆಲವು ವರ್ಷಗಳಿಂದ ಹೆಚ್ಚಾಗಿವೆ. ಮೃಗಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜಿಂಕೆಗಳು ಇವೆ. ಹೀಗಾಗಿ ಮೈಸೂರು ಮೃಗಾಲಯದ ಅಧಿಕಾರಿಗಳು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಟ್ರಕ್ಗಳಲ್ಲಿ 40 ಜಿಂಕೆಗಳನ್ನ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುಮಾರು 2.5 ಎಕರೆ ವಿಸ್ತೀರ್ಣದಲ್ಲಿ ಸುರಕ್ಷಿತವಾಗಿ ತಂತಿ ಬೇಲಿ ಹಾಕಿರುವ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರ:ಕಳೆದ ಮೂರು ತಿಂಗಳಿಂದ ಮೈಸೂರು ಮೃಗಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಮೂರು ಬೋನ್ಗಳನ್ನು ಇಟ್ಟು, ಅದರೊಳಗೆ ಜಿಂಕೆಗಳು ತಿನ್ನುವ ಆಹಾರ ಪದಾರ್ಥಗಳನ್ನು ಇಟ್ಟು, ಅವುಗಳಿಗೆ ಆಹಾರ ಪದ್ಧತಿಯನ್ನು ರೂಢಿ ಮಾಡಲಾಯಿತು. ಬಳಿಕ ಆಹಾರ ಪದಾರ್ಥಗಳನ್ನು ತಿನ್ನಲು ಅಭ್ಯಾಸ ಮಾಡಿಕೊಂಡ 40 ಜಿಂಕೆಗಳನ್ನ ಮೂರು ಬೋನ್ಗಳಲ್ಲಿ ಇಟ್ಟು, ಕ್ರೇನ್ಗಳ ಮೂಲಕ ಆ ಬೋನ್ಗಳನ್ನು ಲಾರಿಯಲ್ಲಿ ಇಟ್ಟುಕೊಂಡು ಯಶಸ್ವಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು.