ಬೆಂಗಳೂರು: ದೀಪಾವಳಿಯ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿಯ ಜನರು ಪಟಾಕಿ ಸಿಡಿಸಿ ಭರ್ಜರಿಯಾಗಿ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಹಸಿರು ಪಟಾಕಿಯ ಕುರಿತು ಹೆಚ್ಚು ಅರಿವು ಮೂಡಿಸಲಾಗಿದ್ದರೂ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ವಾಯು ಮಾಲಿನ್ಯ ಉಸಿರಾಟದ ಸಮಸ್ಯೆ, ಆಸ್ತಮಾ, ಕೆಮ್ಮು ಸೇರಿದಂತೆ ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಹಬ್ಬ ಆರಂಭವಾಗುವುದಕ್ಕೆ ಮೊದಲೇ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆಯನ್ನು ನೀಡಿದ್ದರೂ ಪಟಾಕಿ ಸಿಡಿಸುವುದಕ್ಕೆ ನಗರದ ಜನರು ಉತ್ಸಾಹ ತೋರುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಿಯಮ ಮೀರಿ ಹಲವೆಡೆ ರಾಸಾಯನಯುಕ್ತ ಪಟಾಕಿಯನ್ನು ಹಲವರು ಬಳಸುತ್ತಿದ್ದು, ವಾಯುಮಾಲಿನ್ಯ ಮತ್ತು ಶಬ್ಧ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪ್ರತಿನಿತ್ಯ ವಾಹನಗಳ ಹೊಗೆ ಧೂಳಿನಿಂದ ವಾಯು ಮಾಲಿನ್ಯ ಆಗುತ್ತಿತ್ತು. ಸದ್ಯ ಮೂರು ದಿನ ರಜೆಯಿದ್ದರೂ ವಾಹನಗಳ ಸಂಖ್ಯೆ ಕಡಿಮೆಯಿದ್ದರೂ ವಾಯು ಮಾಲಿನ್ಯ ಮಾತ್ರ ಏರಿಕೆಯಾಗಿದೆ.