ಕರ್ನಾಟಕ

karnataka

ಸೆ.28 ರಂದು ಪಿಎಸ್​ಐ ನೇಮಕಾತಿ ಪರೀಕ್ಷೆ ನಡೆಸಲು ನಿರ್ಧಾರ: ಡಾ. ಜಿ.ಪರಮೇಶ್ವರ್​ - PSI recruitment exam

By ETV Bharat Karnataka Team

Published : Sep 12, 2024, 12:18 PM IST

ಯುಪಿಎಸ್​ಸಿ ಮುಖ್ಯಪರೀಕ್ಷೆ ಕೂಡ ಸೆ. 22 ರಂದು ನಡೆಯುವ ಕಾರಣ, ಪಿಎಸ್​ಐ ಪರೀಕ್ಷೆ ದಿನಾಂಕವನ್ನು ಮುಂದೂಡುವಂತೆ ಆಕಾಂಕ್ಷಿಗಳು ಹಾಗೂ ಬಿಜೆಪಿಯ ಆಯೋಗ ಮನವಿ ಮಾಡಿತ್ತು. ಹಾಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ, ದಿನಾಂಕ ಮುಂದೂಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್​ ಮಾಹಿತಿ ನೀಡಿದರು.

Home Minister Dr. G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

ಗೃಹ ಸಚಿವ ಜಿ. ಪರಮೇಶ್ವರ್​ (ETV Bharat)

ಬೆಂಗಳೂರು: ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆ.28 ಶನಿವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು, ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಯುಪಿಎಸ್​ಸಿ ಮುಖ್ಯಪರೀಕ್ಷೆ ಮತ್ತು ಪಿಎಸ್‌ಐ ಪರೀಕ್ಷೆ ಸೆ.22ರಂದು ನಿಗದಿಯಾಗಿರುವುದರಿಂದ ಎರಡು ಪರೀಕ್ಷೆ ಬರೆಯಲು ಆಗುವುದಿಲ್ಲ. ಯಾವುದಾದರು ಒಂದು ಪರೀಕ್ಷೆ ಅವಕಾಶ ಕೈತಪ್ಪುತ್ತದೆ. ಹೀಗಾಗಿ ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಬಿಜೆಪಿಯ ನಿಯೋಗವು ಮನವಿ ನೀಡಿತ್ತು" ಎಂದು ತಿಳಿಸಿದರು.

"ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ಹೇಳಿದ್ದರು. ನಂತರ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ ಶನಿವಾರದಂದು ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ‌ ಮಾಡಿದ್ದೆ. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತಾರೆ. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ" ಎಂದು ಹೇಳಿದರು.

"ಪೊಲೀಸ್ ಕಾನ್​ಸ್ಟೇಬಲ್​ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಬೇರೆ ರಾಜ್ಯಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ, ವರದಿಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಮನವಿ: ಕೆಇಎ ಜೊತೆ ಚರ್ಚಿಸಿ ಕ್ರಮ ಎಂದ ಗೃಹ ಸಚಿವ ಪರಮೇಶ್ವರ್ - PSI Exam

ABOUT THE AUTHOR

...view details