ಬೆಂಗಳೂರು:ಕಬಿನಿಯಿಂದ ತಮಿಳುನಾಡಿಗೆ ನಿತ್ಯ 8,000 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಹೊರಡಿಸಿರುವ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸಭೆಯಲ್ಲಿ ವಸ್ತುಸ್ಥಿತಿಯ ವಿವರಣೆ ಕೊಟ್ಟಿದ್ದೇವೆ. ರಾಜ್ಯ ಜಲ ವಿವಾದ ಕಾನೂನು ತಂಡದ ಮುಖ್ಯಸ್ಥ ಮೋಹನ್ ಕಾತರಕಿ, ಎಜಿ ಶಶಿಕಿರಣ್ ಶೆಟ್ಟಿಯವರು ಭಾಗವಹಿಸಿದ್ದರು. ಈಗ ಕಬಿನಿಯಿಂದ ನಿತ್ಯ 13,000 ಕ್ಯುಸೆಕ್ ನೀರು ಹೋಗುತ್ತಿದೆ. ಅದರ ಬದಲು ನಿತ್ಯ 8000 ಕ್ಯುಸೆಕ್ಸ್ ನೀರು ಬಿಡೋಣ. ಮಳೆ ಬಾರದೇ ಇದ್ದರೆ ನೀರು ಬಿಡುವ ಪ್ರಮಾಣ ಕಡಿಮೆ ಮಾಡೋಣ. ಜೊತೆಗೆ CWMAನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಿತ್ಯ 1 ಟಿಎಂಸಿ ನೀರು ಬಿಡಲು ಆಗುವುದಿಲ್ಲ. 24 ತಾಸು 11,500 ಕ್ಯುಸೆಕ್ ನೀರು ಬಿಟ್ಟರೆ 1 ಟಿಎಂಸಿ ನೀರಾಗುತ್ತೆ. ಹೀಗಾಗಿ ನಿತ್ಯ 8,000 ಕ್ಯುಸೆಕ್ ನೀರು ಬಿಡಲು ತೀರ್ಮಾನ ಮಾಡಲಾಗಿದೆ. 1 ಟಿಎಂಸಿ ನೀರು ನಿತ್ಯ ಬಿಡಲು ಆಗುವುದಿಲ್ಲ. CWRCಯ ಶಿಫಾರಸನ್ನು CWMAನಲ್ಲಿ ಅಪೀಲು ಮಾಡಬೇಕು ಎಂದು ಸರ್ವಪಕ್ಷ ಸದಸ್ಯರು ಸಲಹೆ ನೀಡಿದ್ದಾರೆ. 11.7.2024ರಂದು CWRC ಜು.30 ವರೆಗೆ ನಿತ್ಯ 1 ಟಿಎಂಸಿಯಂತೆ ಒಟ್ಟು 20 ಟಿಎಂಸಿ ನೀರು ಬಿಡುಗಡೆಗೆ ಶಿಫಾರಸು ಮಾಡಿತ್ತು. ಜೂನ್ ತಿಂಗಳು ತಮಿಳುನಾಡಿಗೆ 9.14 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿತ್ತು. ಜುಲೈನಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿದೆ. ಒಟ್ಟು 40.43 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಈವರೆಗೆ ನಾವು 5 ಟಿಎಂಸಿಗೂ ಅಧಿಕ ನೀರು ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಮೊನ್ನೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ನಾವು ನೀರು ಬಿಡುಗಡೆ ಮಾಡದಿರಲು ತೀರ್ಮಾನ ಮಾಡಿದ್ದೆವು. CWMA ಮುಂದೆ ಅಪೀಲು ಹಾಕಲು ನಿರ್ಧರಿಸಿದ್ದೆವು. ಜೊತೆಗೆ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದ್ದೆವು. ಅದರಂತೆ ಇಂದು ಸರ್ವಪಕ್ಷ ಸಭೆ ನಡೆಸಿದ್ದೇವೆ. ಸರ್ವ ಪಕ್ಷದ ಸದಸ್ಯರು ಸಭೆಯಲ್ಲಿ ಮಾತನಾಡಿದ್ದಾರೆ. ಮೋಹನ್ ಕಾತರಕಿಯವರು ಮಾತನಾಡಿ, ಈ ಬಾರಿ 30% ಒಳ ಹರಿವು ಕಡಿಮೆಯಾಗಿದೆ. ಹಾಗಾಗಿ ಹೆಚ್ಚು ಮಳೆ ಬಂದಿರುವ ವರ್ಷ ಅಲ್ಲ. ನಿತ್ಯ 1 ಟಿಎಂಸಿ ನೀರು ಬಿಡುಗಡೆ ಮಾಡುವುದು ಕಷ್ಟ ಎಂದು ಸಲಹೆ ನೀಡಿದರು ಎಂದು ತಿಳಿಸಿದರು.
ಕಬಿನಿ ಶೇ.96ರಷ್ಟು ಭರ್ತಿಯಾಗಿದೆ. ಹಾರಂಗಿ ಶೇ.76, ಹೇಮಾವತಿ ಶೇ.56, ಕೆಆರ್ಎಸ್ನಲ್ಲಿ ಶೇ.54ರಷ್ಟು ನೀರು ಭರ್ತಿಯಾಗಿದೆ. ಒಟ್ಟು ನಾಲ್ಕು ಅಣೆಕಟ್ಟಿನಲ್ಲಿ ಶೇ.63ರಷ್ಟು ಮಾತ್ರ ನೀರು ಭರ್ತಿಯಾಗಿದೆ. ಐದು ಸಾವಿರ ಕ್ಯುಸೆಕ್ ನೀರು ಕಬಿನಿಗೆ ಒಳಹರಿವು ಬರುತ್ತಿತ್ತು. ಅಷ್ಟು ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದೆವು. ಈಗ ಕಬಿನಿಗೆ ಜು.12ರಂದು 20,000 ಕ್ಯುಸೆಕ್ ಒಳಹರಿವು ಇತ್ತು. ಜುಲೈ 13ರಂದು 19,000 ಕ್ಯುಸೆಕ್ ನೀರು ಒಳಹರಿವು ಹೆಚ್ಚಾಗಿದೆ. ಇಂದು 13,000 ಕ್ಯುಸೆಕ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆ ಹಿನ್ನೆಲೆ ಶೇಖರಣೆ ಮಾಡಲು ಸಾಧ್ಯವಾಗದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.