ಹುಬ್ಬಳ್ಳಿ:ನಗರದಲ್ಲಿ ಉಣಕಲ್ನ ಅಚ್ಚವ್ವನ ಕಾಲೋನಿಯ ಕಟ್ಟಡವೊಂದರಲ್ಲಿ ಡಿ.22ರಂದು ರಾತ್ರಿ ವೇಳೆ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಎಂಟು ಮಂದಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಈ ಆಘಾತದಿಂದ ಇನ್ನು ಹೊರ ಬಂದಿಲ್ಲ.
ಹೌದು, ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಮಾಲಾಧಾರಿಗಳ ಪೈಕಿ 12 ವರ್ಷದ ಬಾಲಕ ವಿನಾಯಕ ಗುಣಮುಖನಾಗಿದ್ದಾನೆ. ಇನ್ನುಳಿದ ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ ಸವದತ್ತಿ(19) ಮೊದಲಿಗೆ ಮೃತಪಟ್ಟಿದ್ದರೇ, ಡಿ.27ರಂದು ಉಣಕಲ್ ನಿವಾಸಿ ರಾಜು ಮೂಗೇರ(16) ಹಾಗೂ ಸಾಯಿನಗರ ಲಿಂಗರಾಜ ಬಿರನೂರ(19) ಮೃತಪಟ್ಟಿದ್ದರು. ಡಿ.29ರಂದು ಶಂಕರ್ ಚವ್ಹಾಣ(30), ಮಂಜುನಾಥ ವಾಗ್ಮೋಡೆ(18), ತೇಜಸ್ವರ್ ಸಾತರೆ (26) ಮೃತಪಟ್ಟಿದ್ದರು. ಮಂಗಳವಾರ ಬೆಳಗ್ಗೆ ಪ್ರಕಾಶ ಬಾರಕೇರ(42) ಮೃತಪಟ್ಟಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಮೃತರಲ್ಲಿ ಪ್ರಕಾಶ ಬಾರಕೇರ ಹಾಗೂ ನಿಜಲಿಂಗಪ್ಪ ಹೊರತುಪಡಿಸಿ ಉಳಿದವರೆಲ್ಲರೂ ಅವಿವಾಹಿತರು ಹಾಗೂ ಪೋಷಕರಿಗೆ ಒಬ್ಬರೇ ಪುತ್ರರಾಗಿದ್ದರು.
ಪ್ರಾಣ ಲೆಕ್ಕಿಸದೇ ಮಗನ ಜೀವ ಉಳಿಸಿದ ಪ್ರಕಾಶ ಬಾರಕೇರ: ಮೃತ ಸಾಯಿನಗರದ ನಿವಾಸಿ ಪ್ರಕಾಶ ಬಾರಕೇರ ಅವರು ಇಸ್ಕಾನ್ ದೇವಾಲಯದಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದರು. ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಪ್ರಕಾಶ ಕಳೆದ ಆರು ವರ್ಷದಿಂದ ಮಾಲೆ ಧರಿಸುತ್ತಿದ್ದರು. ಇವರು 12 ವರ್ಷದ ಮಗ ವಿನಾಯಕನಿಗೆ ಎರಡು ವರ್ಷಗಳಿಂದ ಮಾಲೆ ಹಾಕಿಸುತ್ತಿದ್ದರು. ಡಿ.22ರಂದು ರಾತ್ರಿ ವೇಳೆ ನಡೆದ ಸಿಲಿಂಡರ್ ಸ್ಪೋಟದ ವೇಳೆ 9 ಜನರ ಪೈಕಿ ಬೆಂಕಿ ಹೊತ್ತಿಕೊಂಡಿದ್ದ ಆರು ಜನ ಮಾಲಾಧಾರಿಗಳು ಕಟ್ಟಡದ ಮೇಲಿಂದ ಕೆಳಗೆ ಜಿಗಿದಿದ್ದರು. ಆದರೆ ಪ್ರಕಾಶ ಮಾತ್ರ ತಮ್ಮ ಪ್ರಾಣವನ್ನು ಲೆಕ್ಕಿಸದೇ ಬೆಂಕಿಯಿಂದ ಮಗ ವಿನಾಯಕನ ಜೀವ ಉಳಿಸಿದ್ದರು. ಪ್ರಕಾಶ ಅವರು ಮತ್ತೊಬ್ಬ ಮಾಲಾಧಾರಿ ಜೊತೆ ಸೇರಿ ಮಗನನ್ನು ತಬ್ಬಿಕೊಂಡಿದ್ದರು, ಇದರಿಂದ ಹೆಚ್ಚಿನ ಸುಟ್ಟಗಾಯಗಳಾಗದೇ ಬಾಲಕ ವಿನಾಯಕನ ಜೀವ ಉಳಿದಿದೆ. ಮಗನ ಉಳಿಸಿದ ಪ್ರಕಾಶ ನಿನ್ನೆ(ಮಂಗಳವಾರ) ಕೊನೆಯುಸಿರೆಳೆದಿದ್ದು, ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಕಮರಿದ ಸೈನಿಕನಾಗುವ ಕನಸು:"ಸೈನಿಕನಾಗಬೇಕು ಎಂದು ಕನಸು ಕಂಡಿದ್ದ ಸಂಜಯ ಸವದತ್ತಿ ಸಿದ್ದಗಂಗಾ ಮಠದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ. ಅಪ್ಪಟ ಅಯ್ಯಪ್ಪಸ್ವಾಮಿ ಭಕ್ತನಾಗಿದ್ದ ಸಂಜಯ ಇದೇ ಮೊದಲ ಬಾರಿಗೆ ಮಾಲೆ ಧರಿಸಿದ್ದ. ಕೋವಿಡ್ ವೇಳೆ ತರಕಾರಿ ಮಾರಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಇದ್ದೊಬ್ಬ ಮಗನ ಸಾವಿನಿಂದ ಮನೆ ಕತ್ತಲಾಗಿದೆ" ಎಂದು ಸಂಜಯ ಸವದತ್ತಿ ಅವರ ಪೋಷಕರಾದ ಪ್ರಕಾಶ ಹಾಗೂ ಶಶಿಕಲಾ ಅಳಲು ತೋಡಿಕೊಂಡರು.
ಇನ್ನೇರಡು ವರ್ಷ ಬಿಟ್ಟು ಮಾಲೆ ಧರಿಸುವಂತೆ ಹೇಳಿದ್ದೆ: ಮೃತ ಲಿಂಗರಾಜ್ ಬಿರನೂರು ಅವರು ತಾಯಿ ಕವಿತಾ ಬಿರನೂರು ಮಾತನಾಡಿ, "ಪಿಯುಸಿ ಪ್ರಥಮ ವರ್ಷ ಮುಗಿಸಿದ್ದ ಲಿಂಗರಾಜ್ ಮನೆಯ ಜವಾಬ್ದಾರಿ ಹೊತ್ತು ಬಿವಿಬಿ ಕಾಲೇಜಿನಲ್ಲಿ ಗಾರ್ಡನ್ ನಿರ್ವಹಣೆ ಕೆಲಸ ಮಾಡುತ್ತಿದ್ದ. ಚಿಕ್ಕವನಿದ್ದೀಯಾ ಈಗ ಬೇಡ ಇನ್ನೆರಡು ವರ್ಷ ಬಿಟ್ಟು ಮಾಲೆ ಹಾಕುವಂತೆ ಹೇಳಿದ್ದೆ. ಅದರೂ ಮಾಲೆ ಹಾಕಿಕೊಳ್ಳುತ್ತೇನೆ ಎಂದಾಗ ದೇವರ ಕಾರ್ಯ ಮಾಡಿದ್ರೆ ಒಳ್ಳೆಯದಾಗುತ್ತದೆ ಎಂದು ಸುಮ್ಮನಿದ್ದೆವು. ನಮಗೆ ಮನೆ ಇಲ್ಲ, ಹೊಲ ಇಲ್ಲ. ಈಗ ದುಡಿಯುತ್ತಿದ್ದ ಮಗನೂ ಇಲ್ಲ" ಎಂದು ಕಣ್ಣೀರಿಟ್ಟರು.
ಸೂಕ್ತ ಪರಿಹಾರ ಕೊಡಿ: ಮೃತ ಲಿಂಗರಾಜ್ ಬಿರನೂರು ಅವರ ಅಜ್ಜಿ ಪಾರ್ವತಮ್ಮ ಮಾತನಾಡಿ, "ಮನೆಗೆ ಆಸರೆಯಾಗಿದ್ದ ಮೊಮ್ಮಗನ ಸಾವಿನಿಂದ ಮನೆಗೆ ಯಾರು ದಿಕ್ಕಿಲ್ಲದಂತಾಗಿದೆ. ಹೀಗಾಗಿ ಲಿಂಗರಾಜ್ ತಾಯಿ ಕವಿತಾ ಅವರ ಕೆಲಸವನ್ನು ಖಾಯಂ ಮಾಡಿಸಿಕೊಡಬೇಕು. ನನ್ನ ಮೊಮ್ಮಗನನ್ನು ಯಾರಿಂದಲೂ ಮರಳಿ ತಂದು ಕೊಡಲು ಸಾಧ್ಯವಿಲ್ಲ. ಅವನ ತಾಯಿಗೆ ಸರ್ಕಾರ ಸೂಕ್ತ ಪರಿಹಾರ ಕೊಟ್ಟರೆ ಸಾಕು" ಎಂದು ಮನವಿ ಮಾಡಿದರು.