ಬೆಂಗಳೂರು: ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸಾಲದ ಬೇಡಿಕೆ ಸಲ್ಲಿಸುವ ಎಲ್ಲ ರೈತರಿಗೂ ಸಹಕಾರಿ ಸಂಘಗಳ ಹಣಕಾಸು ಲಭ್ಯತೆಯನುಸಾರ ಸಾಲ ನೀಡುವ ಪ್ರಯತ್ನ ನಡೆಸಲಾಗುತ್ತದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಹಕಾರಿ ಸಂಘಗಳಲ್ಲಿ ಕೃಷಿ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ 63 ಲಕ್ಷ ರೈತರಿದ್ದಾರೆ. ಅವರಲ್ಲಿ 29 ಲಕ್ಷ ರೈತರಿಗೆ ಸಾಲ ಕೊಡಲಾಗಿದೆ. ಹೊಸದಾಗಿ, 12,600 ಜನರಿಗೆ ಮಾತ್ರ ಸಾಲ ಕೊಡಲಾಗಿದೆ. ಆದರೆ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದರು.
ಪ್ರಣಾಳಿಕೆಯಲ್ಲಿ ಸಾಲಮನ್ನಾ ಉಲ್ಲೇಖ ಪ್ರಸ್ತಾಪಿಸಿ ಸಾಲಮನ್ನಾ ಬೇಡಿಕೆಗೆ ಆಕ್ಷೇಪಿಸಿದ ರಾಜಣ್ಣ, ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಕೇಂದ್ರದಿಂದ ಸಾಲಮನ್ನಾ ಮಾಡಿಸಿ. ನಾವೂ ಮಾಡುತ್ತೇವೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ನ ಸಮ್ಮಿಶ್ರ ಸರ್ಕಾರದಲ್ಲಿಯೂ ಸಾಲ ಮನ್ನಾ ಮಾಡಿದ್ದೆವು, ಆದರೆ ಇವರು ಯಾವಾಗ ಮಾಡಿದ್ದರು ಎಂದು ಪ್ರಶ್ನಿಸಿದರು.
ಸಧ್ಯ ರೈತರ ಸಾಲ ಮನ್ನಾ ಮಾಡುವ ಯಾವುದೇ ಪರಿಶೀಲನೆ ನಮ್ಮ ಮುಂದಿಲ್ಲ. ಸಾಲು ಕೇಳುವ ಎಲ್ಲರಿಗೂ ಸಾಲ ಕೊಡುವ ಪ್ರಯತ್ನ ಮಾಡಲಿದ್ದೇವೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 1200 ಅರ್ಜಿ ಬಾಕಿ ಇದೆ ಎಂದಿದ್ದಾರೆ. ಇದು ಸರ್ಕಾರದಿಂದ ಕೊಡುವ ಹಣವಲ್ಲ, ಸಹಕಾರಿ ಸಂಘದಲ್ಲಿನ ಹಣ, ಹಣಕಾಸು ಲಭ್ಯತೆ ಸ್ಥಿತಿ ನೋಡಿಕೊಂಡು ಸಾಲ ಕೊಡುವ ಕೆಲಸ ಮಾಡಲಾಗುತ್ತದೆ. ರೈತರ ಸಂಕಷ್ಟಕ್ಕೆ ಹೋಗುವುದು ಎಲ್ಲ ಸಹಕಾರಿಗಳ ಕರ್ತವ್ಯ ಹಣಕಾಸು ಲಭ್ಯತೆ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.