ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಇಂದು ಕೊನೆಯ ದಿನವಾಗಿದೆ. ಈವರೆಗೂ ಮತ್ತೊಮ್ಮೆ ವಿಸ್ತರಣೆಯಂತಹ ಯಾವುದೇ ಹೇಳಿಕೆ ಸರ್ಕಾರದಿಂದ ಬಂದಿಲ್ಲ. ಹಾಗಾಗಿ, ನಾಳೆಯಿಂದ ದಂಡ ಖಚಿತವಾಗಲಿದೆ.
ಮೊದಲ ಮೂರು ದಿನ ಗ್ರೇಸ್ ಪೀರಿಯಡ್ ರೀತಿ ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ತಿಳುವಳಿಕೆ ನೀಡಲಿದ್ದು, ನಂತರ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಸರ್ಕಾರದಿಂದ ವಿಸ್ತರಣೆ ಇಲ್ಲ:ಈಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ''ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು 2023ರ ಆಗಸ್ಟ್‌ನಿಂದ ಅವಕಾಶ ನೀಡಲಾಗಿದೆ. ಈಗಾಗಲೇ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ. ವಿಸ್ತರಣೆಗೂ ಒಂದು ಮಿತಿ ಇರುತ್ತದೆ. ಹೀಗಾಗಿ, ಇಂದು ಕಡೆಯ ದಿನ ಮತ್ತೆ ವಿಸ್ತರಣೆ ಮಾಡುವ ಯೋಚನೆ ನಮ್ಮ ಮುಂದಿಲ್ಲ'' ಎಂದು ಸ್ಪಷ್ಟಪಡಿಸಿದರು.
ದಂಡದ ಎಚ್ಚರಿಕೆ ನೀಡಿದ ಸಾರಿಗೆ ಇಲಾಖೆ:''ಗಡುವು ಮುಕ್ತಾಯದ ನಂತರವೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಮಾಲೀಕರು 500 ರೂ. ದಂಡ ಪಾವತಿಸಬೇಕಾಗುತ್ತದೆ. ನಾಳೆಯಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಲಿದ್ದಾರೆ. ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ವಾಹನಗಳಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಯಲಿದೆ'' ಎಂದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ಹೇಳಿದರು.
ಮೊದಲು ತಿಳುವಳಿಕೆ, ನಂತರ ದಂಡ:ದಿನಾಂಕ ವಿಸ್ತರಣೆ ಇಲ್ಲ ಎಂದು ಸಾರಿಗೆ ಸಚಿವರೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಸೋಮವಾರ(ಸೆ.16) ಆರ್ಟಿಒ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಲಿದ್ದಾರೆ. ರಾಜ್ಯಾದ್ಯಂತ ಹೆಚ್‌ಎಸ್‌ಆರ್‌ಪಿ ನೋಂದಣಿ ಫಲಕ ಹಾಕಿಸದ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಿದ್ದಾರೆ. ಈಗಾಗಲೇ ಈ ಸಂಬಂಧ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ.
ನಾಳೆಯಿಂದ ಸೆ. 18ರವರೆಗೂ ದಂಡ ವಿಧಿಸುವ ಸಾಧ್ಯತೆ ಕಡಿಮೆ ಇದೆ. ಹೆಚ್‌ಎಸ್‌ಆರ್‌ಪಿ ಹಾಕಿಸದ ವಾಹನ ಸವಾರರನ್ನು ತಡೆದು ಅವರಿಗೆ ತಿಳುವಳಿಕೆಯೊಂದಿಗೆ ದಂಡದ ಎಚ್ಚರಿಕೆ ನೀಡಿ ಕಳಿಸುವಂತೆ ಆಂತರಿಕವಾಗಿ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಹಾಗಂತ ದಂಡ ವಿಧಿಸದೇ ಇರುತ್ತಾರೆ ಎಂದಲ್ಲ, ದಂಡ ವಿಧಿಸಬಹುದು ಅಥವಾ ಎಚ್ಚರಿಕೆ ನೀಡಿ ಕಳಿಸಬಹುದು. ಬಹುತೇಕ ಎಚ್ಚರಿಕೆ ನೀಡಿ ಕಳಿಸಲು ಆದ್ಯತೆ ಇರಲಿದೆ ಎನ್ನಲಾಗಿದೆ.
ಕೋರ್ಟ್ ನಿರ್ಧಾರದ ಮೇಲೆ ರಿಲೀಫ್:ಸೆಪ್ಟೆಂಬರ್ 18ರಂದು ಹೈಕೋರ್ಟ್‌ನಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ ಅಲ್ಲಿಯವರೆಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಹಾಗಾಗಿ, ಮೂರು ದಿನಗಳ ಕಾಲ ರಿಲ್ಯಾಕ್ಸ್ ಸಿಕ್ಕರೂ ನಂತರ ಹೈಕೋರ್ಟ್ ಯಾವ ತೀರ್ಪು ನೀಡಲಿದೆಯೋ ಅದರ ಆಧಾರದಲ್ಲಿ ವಾಹನ ಮಾಲೀಕರಿಗೆ ದಂಡವೋ, ಸಮಯ ವಿಸ್ತರಣೆಯೋ ಎನ್ನುವ ಸುದ್ದಿ ಸಿಗಲಿದೆ.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾದ 2 ಕೋಟಿ ವಾಹನಗಳು ಹೆಚ್‌ಎಸ್‌ಅರ್‌ಪಿ ಅಳವಡಿಸಿಕೊಳ್ಳಬೇಕಿದೆ. ಅದರಲ್ಲಿ 55 ಲಕ್ಷ ವಾಹನಗಳಿಗೆ ಮಾತ್ರ ಹೆಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಇನ್ನೂ 1.45 ಕೋಟಿ ವಾಹನಗಳಿಗೆ ಅಳವಡಿಕೆ ಬಾಕಿ ಇದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ದಿನಾಂಕ ವಿಸ್ತರಿಸಿದರೂ ವಾಹನ ಮಾಲೀಕರಿಂದ ಹೆಚ್ಚಿನ ಉತ್ಸಾಹ ಕಾಣದ ಹಿನ್ನೆಲೆಯಲ್ಲಿ ಕೋರ್ಟ್ ಈ ಬಾರಿ ದಂಡ ವಿಧಿಸಲು ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ರಸೀದಿ ಇದ್ದರೆ ದಂಡವಿಲ್ಲ:ಆನ್ಲೈನ್ನಲ್ಲಿ ಹೆಚ್‌ಎಸ್‌ಅರ್‌ಪಿ ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದರೂ ನಂಬರ್ ಪ್ಲೇಟ್ ಅಳವಡಿಕೆಗೆ ಕನಿಷ್ಠ ಒಂದು ವಾರ ಕಾಯುವ ಸ್ಥಿತಿ ಇದೆ. ಇದರಲ್ಲಿ ಸಮಯ ಮತ್ತೂ ಹೆಚ್ಚಬಹುದು. ಹಾಗಾಗಿ, ಆನ್ಲೈನ್ ನೋಂದಣಿ ಮಾಡಿಸಿಕೊಂಡವರು ರಸೀದಿ ತೋರಿಸಿದಲ್ಲಿ ದಂಡದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಹಾಗಾಗಿ. ಯಾರೆಲ್ಲಾ ಹೆಚ್‌ಎಸ್‌ಅರ್‌ಪಿಗೆ ಅರ್ಜಿ ಸಲ್ಲಿಸಿ ಇನ್ನೂ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲವೋ ಅವರು ತಮ್ಮೊಂದಿಗೆ ರಸೀದಿಯನ್ನು ಹೊಂದಿರಬೇಕು. ಪೊಲೀಸರು ಕೇಳಿದಾಗ ತೋರಿಸಿದಲ್ಲಿ ದಂಡದಿಂದ ಪಾರಾಗಬಹುದಾಗಿದೆ.
ಇದನ್ನೂ ಓದಿ:ರಜಾ ದಿನದಲ್ಲೂ ಅಧಿಕಾರಿಗಳು ಕಾರ್ಯನಿರ್ವಹಿಸಿ ರಸ್ತೆ ಗುಂಡಿ ಮುಚ್ಚಬೇಕು: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ - Road Work