ಚಾಮರಾಜನಗರ: ಉತ್ಕೃಷ್ಟ ಮಟ್ಟದ ಕರಿಕಲ್ಲಿಗೆ ಹೆಸರಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ರಾಜಧನ, ಡಿಎಂಎಫ್ ಸಂಗ್ರಹಣೆ ನಿರೀಕ್ಷೆ ಮಟ್ಟದಲ್ಲಿರದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಹುದ್ದೆಯನ್ನು ರದ್ದು ಪಡಿಸಲಾಗಿದೆ. ಹೌದು, ಕಳೆದ 20ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಸುಮ ಗಣಿ ಇಲಾಖೆ ಉಪ ನಿರ್ದೇಶಕರ ಹುದ್ದೆ ನಿಮ್ನೀಕರಿಸಿ ಹಿರಿಯ ಭೂ ವಿಜ್ಞಾನಿ ಹುದ್ದೆಯನ್ನಾಗಿ ಪರಿವರ್ತಿಸಲಾಗಿದೆ.
ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಾವಳಿ 2023ರ ಮಾ.17 ರಿಂದ ಜಾರಿಯಾಗಿದ್ದು 2016ರ ಆ.12ರ ಪೂರ್ವದಲ್ಲಿ ಸ್ವೀಕೃತಗೊಂಡು ನಿಯಮ 8(ಬಿ) ರನ್ವಯ ಅನರ್ಹಗೊಂಡ ಅರ್ಜಿಗಳನ್ನು ಕಲ್ಲು ಗಣಿ ಗುತ್ತಿಗೆಗೆ ಮಂಜೂರಾತಿಗಾಗಿ ಪರಿಗಣಿಸಬೇಕಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಅರ್ಜಿಗಳು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಹಾಗು ಚಾಮರಾಜನಗರ ಜಿಲ್ಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು ವಿಲೇವಾರಿಗೆ ಕಾರ್ಯದೊತ್ತಡ ಹೆಚ್ಚಾಗುವ ಸಾದ್ಯತೆ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.