ಬೆಂಗಳೂರು: "ರಾಜಕಾರಣ ಫುಟ್ಬಾಲ್ ಅಲ್ಲ, ಅದೊಂದು ಚೆಸ್ ಗೇಮ್. ಆದ್ದರಿಂದ ಚೆಸ್ ಆಟಗಾರರು ಉತ್ತಮ ರಾಜಕೀಯಪಟು ಆಗಬಹುದು" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಒಂದನೇ ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, "ಇಲ್ಲಿ ಅನೇಕ ಯುವ ಪ್ರತಿಭೆಗಳನ್ನು ನೋಡುತ್ತಿದ್ದೇನೆ. ನಾನು ಚೆಸ್ ಆಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ರಾಜಕಾರಣ ಫುಟ್ಬಾಲ್ ಅಲ್ಲ, ಅದೊಂದು ಚೆಸ್ ಗೇಮ್" ಎಂದು ಹೇಳಿದರು.
"ಇದು ಚಾಣಾಕ್ಷತನದ ಆಟ. ಈ ಆಟದಲ್ಲಿ ನಮ್ಮ ರಾಜನ ರಕ್ಷಣೆ ಮಾಡಬೇಕು, ಎದುರಾಳಿ ರಾಜನನ್ನು ಮಣಿಸಬೇಕು. ರಾಜಕೀಯವೂ ಇದೇ ಮಾದರಿಯಲ್ಲಿದೆ. ಹೀಗಾಗಿ ಚೆಸ್ ಆಟಗಾರರು ಉತ್ತಮ ರಾಜಕೀಯ ನಾಯಕರಾಗಬಹುದು. ಸೌಮ್ಯ ಅವರು ಅತ್ಯುತ್ತಮವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಪ್ರಪಂಚದಾದ್ಯಂತ ಇರುವ ಗ್ರ್ಯಾಂಡ್ ಮಾಸ್ಟರ್ಗಳನ್ನು ಬೆಂಗಳೂರಿಗೆ ಕರೆತಂದು ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಬೆಂಗಳೂರು ಉತ್ತಮ ಹವಾಮಾನ ಹೊಂದಿರುವ ನಗರ. ಬೆಂಗಳೂರು ಐತಿಹಾಸಿಕ ನಗರಿ. ಇಲ್ಲಿ ಉತ್ತಮ ಪ್ರತಿಭೆಗಳು, ಶಿಕ್ಷಣ ಸಂಸ್ಥೆಗಳಿವೆ. ಈ ಹಿನ್ನಲೆಯಲ್ಲಿ ಇಲ್ಲಿ ಈ ಸ್ಪರ್ಧೆ ಆಯೋಜಿಸಿರುವ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಆಯೋಜಕರಿಗೆ ಧನ್ಯವಾದಗಳು" ಎಂದರು.