ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಮನಗರ: ತಾನು ಅಕ್ರಮ ಮಾಡಿ ಅದನ್ನು ಬೇರೆಯವರ ಮೂತಿಗೆ ಒರೆಸುವುದು ಕುಮಾರಸ್ವಾಮಿ ಜಾಯಮಾನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ರಾಮನಗರ ಜಿಲ್ಲೆಯ ಹುಟ್ಟೂರು ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಇಂದು ಮತದಾನ ಮಾಡಿದ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್, ಹಣ ಹಂಚುತ್ತಿರುವುದು ಕುಮಾರಸ್ವಾಮಿ. ತಾನು ಮಾಡಬಾರದ್ದನ್ನು ಮಾಡಿ ಬೇರೆಯವರ ಮೂತಿಗೊರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರುಗಳು ಈ ಕ್ಷೇತ್ರದಲ್ಲಿ ಕಾರ್ಡ್ಗಳನ್ನು ಹಂಚುತ್ತಿದ್ದಾರೆ. ಅವರು ಕಾರ್ಡ್ ಹಂಚಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದರು.
ನಾವು ಜನರ ಮುಂದೆ ಕೈ ಮುಗಿದು ಮತ ಕೇಳುತ್ತಿದ್ದೇವೆ. ಅವರು ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕುಮಾರಸ್ವಾಮಿ ಚುನಾವಣೆಗೆ ಮುನ್ನ ಮಂಡ್ಯಕ್ಕೆ ಹೋಗಿದ್ದರೇ? ರಾಮನಗರ, ಕನಕಪುರಕ್ಕೆ ಹೋಗಿದ್ದರೇ? ಹೀಗಾಗಿ ಹಿಂಡುಹಿಂಡಾಗಿ ಅವರ ಕಾರ್ಯಕರ್ತರು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.
ಲುಲು ಮಾಲ್‌ನಲ್ಲಿ 10 ಸಾವಿರ ಗಿಫ್ಟ್ ಕೂಪನ್ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, ಅವರು ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ?, ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಲು ಹೇಳಿ. ಖಾಲಿ ಮಾತಿನ ಮೂಲಕ ಹಿಟ್ ಅಂಡ್ ರನ್ ಮಾಡುವುದಲ್ಲ. ಸಾಕ್ಷಿ ಇದ್ದರೆ ಆಯೋಗಕ್ಕೆ ದೂರು ನೀಡಲಿ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದರಿಂದ ಜನರಿಗೆ ಶಕ್ತಿ ಬಂದಿದೆ. ಅವರ ಮನೆಯಲ್ಲಿ ಕೆಲಸ ಮಾಡುವವರಿಗೂ ನಮ್ಮ ಗ್ಯಾರಂಟಿ ತಲುಪುತ್ತಿದೆ. ಅವರ ಮತಗಳು ನಮಗೆ ಬರಲಿವೆ ಎಂದು ಟಾಂಗ್ ನೀಡಿದರು.
ಐಟಿ ದಾಳಿ ಕುರಿತ ಪ್ರಶ್ನೆಗೆ, ನಮ್ಮ ಪಕ್ಷದ ನಾಯಕರ ಮನೆ ಮೇಲೆ ದಾಳಿ ಮಾಡಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ನಾನು ಐಟಿ ಇಲಾಖೆ ಕಚೇರಿಗೆ ಹೋಗುತ್ತೇನೆ. ನಮ್ಮ ನಾಯಕರು ಚುನಾವಣೆಗೆ ಬರಬಾರದು ಎಂದು ಈ ತಂತ್ರ ರೂಪಿಸುತ್ತಿದ್ದಾರೆ. ಈ ಶಾಲೆಗಳಿರುವ ಜಾಗ ನಮ್ಮ ಸ್ವಂತದ್ದು. ಅದನ್ನು ವಿದ್ಯಾಭ್ಯಾಸಕ್ಕಾಗಿ ದಾನ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಇಂತಹ ಎಂಟು ಕಟ್ಟಡಗಳಿವೆ. ಕುಮಾರಸ್ವಾಮಿ ಬಂದು ಈ ಕಟ್ಟಡ ಕಟ್ಟಿದ್ದರಾ? ಈ ರೀತಿ ತಮ್ಮ ಆಸ್ತಿ ದಾನ ಮಾಡಿದ್ದಾರಾ? ಎಂದರು.
ಇದನ್ನೂಓದಿ:ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ಹಾಕಲು ಕಾಂಗ್ರೆಸ್ ಚಿಂತನೆ ನಡೆಸಿದೆ: ಬಸವರಾಜ ಬೊಮ್ಮಾಯಿ - Lok Sabha Election 2024