ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಪ್ರಬುದ್ಧ ರಾಜಕಾರಣಿ, ಅವರ ಹಗರಣಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಪದೇ ಪದೆ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ, ವಾಲ್ಮಿಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಮಾತನಾಡಬೇಕು ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ''ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹಾಗೆ ನೋಡಿದರೆ ವಾಲ್ಮೀಕಿ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಬೇಕು. ಬ್ಯಾಂಕ್ಗಳು ಕೇವಲ 2 ಗಂಟೆಗಳಲ್ಲಿ ಸಾಲವನ್ನು ಮಂಜೂರು ಮಾಡಿದ್ದು, ಬ್ಯಾಂಕುಗಳ ಮೇಲೆ ಅಧಿಕಾರವನ್ನು ಹೊಂದಿರುವ ನಿರ್ಮಲಾ ಸೀತರಾಮನ್ ಅವರು ಮಾತನಾಡಬೇಕು ಎಂದು ಅವರು ಯಾಕೆ ಕೇಳುತ್ತಿಲ್ಲ. ವಿಜಯೇಂದ್ರ ಓರ್ವ ಅಪ್ರಬುದ್ಧ ರಾಜಕಾರಣಿ'' ಎಂದು ಕಿಡಿಕಾರಿದರು.
''ವಿಜಯೇಂದ್ರ ಅವರ ಹಗರಣಗಳನ್ನು ನಾವು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆ. ಆ ಹಗರಣಗಳ ಬಗ್ಗೆ ಬಿಜೆಪಿ ಪಕ್ಷಕ್ಕೂ ಗೊತ್ತಿದೆ. ಅಂತಾರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ. ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ವಿಜಯೇಂದ್ರ ಅವರು ಪ್ರಾಮಾಣಿಕರಾಗಿಲ್ಲ. ಹೀಗಾಗಿ, ಅವರು ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಹೊಂದಿಲ್ಲ'' ಎಂದು ಟೀಕಿಸಿದರು.