ಬೆಂಗಳೂರು : “ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಈ ವಿಚಾರವಾಗಿ ಹೇಳಿಕೆ ನೀಡಿರುವ ಶಾಸಕ ಗವಿಯಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ನೀಡಲಾಗುವುದು” ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಗ್ಯಾರಂಟಿ ನಿಲ್ಲಿಸಿ ಅನುದಾನ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳುತ್ತಿದ್ದೇವೆ ಎಂಬ ಶಾಸಕ ಗವಿಯಪ್ಪ ಅವರ ಹೇಳಿಕೆ ಬಗ್ಗೆ ಅಂಬೇಡ್ಕರ್ ಭವನದಲ್ಲಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು: “ಅವರು ಈ ರೀತಿ ಹೇಳಿದ್ದಾರೆ ಎಂದು ನಾನು ನಂಬುವುದಿಲ್ಲ. ಒಂದು ವೇಳೆ ಅವರು ಈ ಹೇಳಿಕೆ ಕೊಟ್ಟಿದ್ದೇ ಆಗಿದ್ದರೆ ವಿವರಣೆ ಕೇಳಿ ನೋಟಿಸ್ ನೀಡುತ್ತೇವೆ. ನಾವು ಗ್ಯಾರಂಟಿ ವಿಚಾರದಲ್ಲಿ ರಾಜ್ಯದ ಜನರಿಗೆ ಮಾತು ಕೊಟ್ಟಿದ್ದು, ಎಂತಹುದ್ದೇ ಪರಿಸ್ಥಿತಿ ಬಂದರೂ ನಾವು ಅದಕ್ಕೆ ಬದ್ಧವಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಅನರ್ಹರು ಇದರ ಲಾಭ ಪಡೆಯುತ್ತಿದ್ದರೆ, ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಈ ಯೋಜನೆಗಳಿಂದ ಪ್ರತಿ ಕ್ಷೇತ್ರಕ್ಕೆ 250 ಕೋಟಿಯಷ್ಟು ಹಣ ಹೋಗುತ್ತಿದೆ. ಇದು ಆ ಕ್ಷೇತ್ರದ ಜನರ ಅಭಿವೃದ್ಧಿಯಲ್ಲವೇ? ಅಭಿವೃದ್ಧಿ ಕಾರ್ಯಗಳಿಗೂ ನಾವು ಅನುದಾನ ನೀಡುತ್ತಿದ್ದೇವೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ನಾನು ದೆಹಲಿಗೆ ಭೇಟಿ ನೀಡುತ್ತಿರುವುದು ಮಹದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಹಾಗೂ ಆ ಭಾಗದ ಸಂಸದರನ್ನು ಭೇಟಿಯಾಗಲು. ಜೊತೆಗೆ ಜಾರ್ಖಂಡ್ನಲ್ಲಿ ಹೇಮಂತ್ ಸೊರೆನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುವುದು. ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ನೂರು ವರ್ಷಗಳಾಗಿರುವ ಹಿನ್ನೆಲೆ ಆ ಕಾರ್ಯಕ್ರಮದ ರೂಪುರೇಷೆ ವಿಚಾರವಾಗಿ ಚರ್ಚೆ ಮಾಡಲು ತೆರಳುತ್ತಿದ್ದೇನೆ” ಎಂದು ತಿಳಿಸಿದರು.