ರಾಮನಗರ:"ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು. ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
"ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಇತ್ತು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದ್ದೆವು. ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ" ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದವರಿಗೆಲ್ಲಾ ಸ್ಥಾನಮಾನ ನೀಡಿದ್ದೇವೆ : "ರಾಮಕೃಷ್ಣ ಹೆಗಡೆ ಅವರು ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದರು. ಟಿಎಪಿಸಿಎಂಎಸ್ ಚುನಾವಣೆ ನಡೆಯಿತು. ಸಾತನೂರು ಕ್ಷೇತ್ರದಿಂದ ನಾನು, ಕನಕಪುರ ಕ್ಷೇತ್ರದಿಂದ ಕಂಠಿ ಅವರು ಸ್ಪರ್ಧಿಸಿದ್ದೆವು. ಆಗ ರಾತ್ರೋರಾತ್ರಿ ಕಾಂಗ್ರೆಸ್ ಜಾಗ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿಕೊಂಡಿದ್ದರು. ಸಿಂಧ್ಯಾ ಅವರು ಮಂತ್ರಿಯಾಗಿ, ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದರು. ಆಗ ಅದನ್ನು ಮುಟ್ಟಲು ಆಗುತ್ತಿರಲಿಲ್ಲ. ಆಗ ನಾವಿಬ್ಬರೂ ಗೆದ್ದಿದ್ದೆವು. ಆನಂತರ ನಾನು ಸಹಕಾರ ಸಚಿವನಾದೆ, ನೀರಾವರಿ ಸಚಿವನಾದೆ, ಇಂದು ಡಿಸಿಎಂ ಆಗಿದ್ದೇನೆ. ಪಕ್ಷದ ಅಧ್ಯಕ್ಷನೂ ಆಗಿದ್ದೇನೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಶ್ರಮ ಇದ್ದಲ್ಲಿ ಫಲ ಇದೆ. ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರದಲ್ಲಿ ಬ್ಲಾಕ್ ಅಧ್ಯಕ್ಷರಾಗಿದ್ದವರಿಗೆ ಒಂದಲ್ಲಾ ಒಂದು ಹುದ್ದೆ ನೀಡಿದ್ದೇವೆ" ಎಂದರು.
ಯಾರು ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ :"ನಿಮಗೆ ನೀಡಿರುವ ಸ್ಥಾನಮಾನ ಕಡಿಮೆ ಎಂದು ಭಾವಿಸಬೇಡಿ. ಇಲ್ಲಿ ಆಶ್ರಯ ಸಮಿತಿ ಹಾಗೂ ಬಗರ್ ಹುಕುಂ ಸಮಿತಿ ಜವಾಬ್ದಾರಿಯನ್ನು ಸುರೇಶ್ ಅವರಿಗೆ ವಹಿಸಿದ್ದೇವೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ನ್ಯಾಯಬದ್ಧವಾಗಿ ಬಡವರಿಗೆ ಸಿಗಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಗೌರವಯುತವಾಗಿ ನಿಭಾಯಿಸಿ. ನೀವೆಲ್ಲರೂ ಸೇರಿ ಯೋಗೇಶ್ವರ್ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೀರಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಇದು ರಾಜಕಾರಣ. ನಾವು ಒಗ್ಗಟ್ಟಿನಿಂದ ಜನರ ಆಶೋತ್ತರಗಳಿಗೆ ಕೆಲಸ ಮಾಡಬೇಕು" ಎಂದು ಹೇಳಿದರು.