ಬೆಂಗಳೂರು: ''ಜನಾರ್ದನ ರೆಡ್ಡಿ ಅವರು ಚಪಲಕ್ಕೆ ಮಾತನಾಡುತ್ತಾರೆ. ನನ್ನ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಶ್ರೀರಾಮುಲು ಅವರನ್ನು ಡಿಕೆಶಿ ಸಂಪರ್ಕ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ''ಅವರು ಚಪಲಕ್ಕೆ ಮಾತಾಡ್ತಾರೆ. ಅವರು ಪಾರ್ಟಿಯಲ್ಲೇ ಇರಲಿಲ್ಲ. ಈಗ ಪಾರ್ಟಿಗೆ ಕಾಲಿಟ್ಟು, ಮನೆ ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಯಾಕೆ ಅವರನ್ನು ದೊಡ್ಡವನನ್ನಾಗಿ ಮಾಡಲಿ?. ಅವರು ನನ್ನ ಹೆಸರು ತಗೊಂಡರೆ ನಾನು ದೊಡ್ಡವನಾಗುತ್ತೇನಾ'' ಎಂದು ಪ್ರಶ್ನಿಸಿದರು.
2023ರಲ್ಲಿ ಪಕ್ಷಕ್ಕೆ ಆಹ್ವಾನಿಸಿದ್ದೆ:''ಅವರು ಯಾರ ಸಂಪರ್ಕದಲ್ಲಿದ್ದರು ಅಂತ ಚರ್ಚೆ ಬೇಡ. ನನ್ನ ಹೆಸರು ಮಿಸ್ಯೂಸ್ ಮಾಡಿಕೊಳ್ಳುತ್ತಿದ್ದಾರೆ. ನನಗೆ ರಾಮುಲು ಸಿಕ್ಕಿಲ್ಲ, ಮಾತಾಡಿಲ್ಲ. 2023ರ ಚುನಾವಣೆಗೂ ಮೊದಲು ಮಾತನಾಡಿದ್ದೆ. ಆಗ ಇಲ್ಲ, ಬಿಜೆಪಿ ಪಕ್ಷದಲ್ಲೇ ಉಳಿಯುತ್ತೇನೆ ಅಂತ ಹೇಳಿದ್ದರು. ಈಗ ರಾಮುಲು ಅವರ ಪಕ್ಷ ಸೇರ್ಪಡೆ ವಿಚಾರ ನನ್ನ ಟೇಬಲ್ ಮುಂದೆ ಬಂದರೆ, ಆಮೇಲೆ ತೀರ್ಮಾನ ಮಾಡುತ್ತೇನೆ'' ಎಂದು ತಿಳಿಸಿದರು.