ಹುಬ್ಬಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿ:ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಮಾತ್ರವಲ್ಲದೆ, ಇನ್ನೂ ಅನೇಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೇವಲ ಇಬ್ಬರ ಹೆಸರು ಮಾತ್ರ ಯಾಕೆ ಹೇಳುತ್ತೀರಾ?. ಆ ವಿಚಾರವೆಲ್ಲ ಈಗೇಕೆ?, ನಮ್ಮ ಕಾರ್ಯಕರ್ತರಿಗೆಲ್ಲ ಸ್ಥಳೀಯವಾಗಿ ಬರುವವರನ್ನೆಲ್ಲ ಸೇರಿಸಿಕೊಳ್ಳುವಂತೆ ಈಗಾಗಲೇ ಹೇಳಿದ್ದೇನೆ. ಯಾರ್ಯಾರೆಲ್ಲ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಗುಟ್ಟು ಹೇಳುವುದಕ್ಕಾಗುತ್ತಾ?'' ಎಂದು ಪ್ರತಿಕ್ರಿಯಿಸಿದರು. ಬಹಳ ಜನ ಬರುವವರಿದ್ದಾರಾ ಎಂಬ ಪ್ರಶ್ನೆಗೆ, "ಹೌದು" ಎಂದರು.
ಮಹದಾಯಿ- ಪ್ರಹ್ಲಾದ್ ಜೋಶಿ ಉತ್ತರಿಸಲಿ: ''ಮಹದಾಯಿ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ಕೊಡಬೇಕು. ಇದೇ ವಿಚಾರವನ್ನು ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು. ಹಾಗಾದರೆ ಇನ್ನೂ ಯಾಕೆ ತೊಡಕುಗಳ ನಿವಾರಣೆ ಮಾಡುತ್ತಿಲ್ಲ?'' ಎಂದು ಡಿ.ಕೆ.ಶಿವಕುಮಾರ್ ಎಂದು ಹೇಳಿದರು.
''ಮಹದಾಯಿಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಪ್ರಹ್ಲಾದ್ ಜೋಶಿಯವರು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಅವರಿಗೊಂದು ಗೌರವ. ಅಧಿಕಾರ ಯಾವತ್ತಿಗೂ ಶಾಶ್ವತವಾಗಿ ಇರುವುದಿಲ್ಲ. ಆದರೆ, ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ, ಮಹದಾಯಿ ಬಗ್ಗೆ ಉತ್ತರಿಸಲಿ'' ಎಂದು ಒತ್ತಾಯಿಸಿದರು.
ಶೆಟ್ಟರ್ಗೆ ತಿರುಗೇಟು:"ಕಾಂಗ್ರೆಸ್ನಲ್ಲಿ ಫ್ಲಡ್ ಗೇಟ್ ಓಪನ್ ಆಗುತ್ತದೆ" ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಉತ್ತರಿಸಿ, ''ಈ ತಿಂಗಳ ಬಳಿಕ ಶೆಟ್ಟರ್ ಅವರಿಂದ ಪಶ್ಚಾತ್ತಾಪದ ಹೇಳಿಕೆ ಹೊರಬರಲಿದೆ, ಕಾದು ನೋಡಿ'' ಎಂದು ತಿರುಗೇಟು ನೀಡಿದರು.
''ಇಂದು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಅಥಣಿಗೆ ತೆರಳುತ್ತಿದ್ದೇವೆ. ಸಿಎಂ ಸಿದ್ಧರಾಮಯ್ಯ ಕೂಡ ಆಗಮಿಸುತ್ತಿದ್ದಾರೆ. 1 ಲಕ್ಷದ 26 ಸಾವಿರ ಕೋಟಿ ರೂ. ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ'' ಎಂದು ತಿಳಿಸಿದರು.
2018ರ ಇಡಿ ಪ್ರಕರಣ ರದ್ದು ವಿಚಾರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ''ಇಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಒಂದು ರೀತಿ, ಇಂದು ಒಂದು ರೀತಿ ತೋರಿಸ್ತೀರಿ'' ಎಂದು ಗರಂ ಆದರು.
ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ವಿಚಾರಕ್ಕೆ, ''ಬಿಜೆಪಿಯವರಿಗೆ ಯಾವಾಗ ಬೇಕಂತೆ? ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಅವರನ್ನೇಕೆ ಬಂಧನ ಮಾಡಲಿಲ್ಲ? ನಾವು ಘೋಷಣೆ ಕೂಗಿದವರ ವಿಚಾರಣೆ ಮಾಡುತ್ತಿದ್ದೇವೆ. ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದಾರೆ. ಬಿಜೆಪಿಯವರಿಗೆ ಬದ್ಧತೆ ಇದೆಯಾ?'' ಎಂದು ಹರಿಹಾಯ್ದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿ, ''ನಾಳೆ ಚುನಾವಣಾ ಆಯೋಗದ ಸಭೆಯಿದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ'' ಎಂದರು.
ಮುಂದಿನ ಮುಖ್ಯಮಂತ್ರಿ ಘೋಷಣೆ:ಡಿ.ಕೆ.ಶಿವಕುಮಾರ್ ಆಗಮನದ ವೇಳೆ ಕಾರ್ಯಕರ್ತರು ''ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್'' ಎಂದು ಘೋಷಣೆ ಕೂಗಿದ ಘಟನೆ ನಡೆಯಿತು. ಡಿಕೆಶಿ ಜೊತೆ ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ಇತರರು ಇದ್ದರು.
ಇದನ್ನೂ ಓದಿ:ಕಷ್ಟದ ಜೀವನದ ಅತಿ ದೊಡ್ಡ ಸಂತೋಷದ ದಿನ ಇಂದು, ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ: ಡಿಕೆಶಿ