ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ (ETV Bharat) ಬೆಂಗಳೂರು: ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಂದು ಶೇಷಾದ್ರಿಪುರ ಜಂಕ್ಷನ್ ಬಳಿ ರಾಜೀವ್ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎಂಬ ಮಾಧ್ಯಮದವರ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದರು.
ಕಾಂಗ್ರೆಸ್ ಮುಖಂಡರಿಂದ ರಾಜ್ಯಪಾಲರ ನಿಂದನೆ ವಿರುದ್ಧ ಬಿಜೆಪಿ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ, ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ ಎಂದು ದೂರಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಪೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು. ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್‌ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ ಎಂದು ತಿಳಿಸಿದರು.
ರಾಜ್ಯಪಾಲರ ವಿರುದ್ಧ ಕೈ ನಾಯಕರ ಕಿಡಿ:ಮತ್ತೊಂದೆಡೆ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಅರ್ಜಿ ಸಂಬಂಧ ಕ್ರಮ ಕೈಗೊಳ್ಳದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪಗಳಿವೆ. ಲೋಕಾಯುಕ್ತ ಹೆಚ್ಡಿಕೆ ವಿರುದ್ದ ಪ್ರಾಸಿಕ್ಯೂಷನ್ ಕೇಳಿದೆ. ಇದನ್ನು ತಿರುಚಿ ಕುಮಾರಸ್ವಾಮಿ ಮಾತನಾಡ್ತಿದ್ದಾರೆ. ಲೋಕಾಯುಕ್ತ ಚಾರ್ಜ್ಶೀಟ್ನಲ್ಲಿ ಆರೋಪ ಇದೆ. ಕಾನೂನುಬಾಹಿರ ಶಿಫಾರಸು ಎಂದು ಪ್ರಸ್ತಾಪಿಸಲಾಗಿದೆ. ಚಾರ್ಜ್ಶೀಟ್ನಲ್ಲಿ ಭ್ರಷ್ಟಾಚಾರದ ಹೆಸರಿದೆ. ಅಂತವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದಾ ಎಂದು ಪ್ರಶ್ನಿಸಿದರು.
ಎಂಎಲ್ಸಿ ಸಲೀಂ ಅಹ್ಮದ್ ಮಾತನಾಡಿ, 10 ತಿಂಗಳಿಂದ ರಾಜ್ಯಪಾಲರು ಯಾಕೆ ಅನುಮತಿ ಕೊಡಲಿಲ್ಲ. ಟಿ.ಜೆ.ಅಬ್ರಹಾಂ ಕೊಟ್ಟ ದೂರಿಗೆ ಸಿಎಂಗೆ ನೋಟಿಸ್ ಕೊಡ್ತಾರೆ. ಲೋಕಾಯುಕ್ತದವರೇ ಪ್ರಾಸಿಕ್ಯೂಷನ್ಗೆ ಕೇಳಿದ್ರು. ನಮ್ಮ ಒತ್ತಾಯದ ಮೇಲೆ ರಾಜ್ಯಪಾಲರು ಈಗ ಮುಂದಾಗಿದ್ದಾರೆ. ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಬಗ್ಗೆ ನೋಡ್ತಿದ್ದಾರೆ. ರಾಜ್ಯಪಾಲ ಆದವರು ರಾಜಕೀಯ ಮಾಡಬಾರದು. ಕಾನೂನು ಪ್ರಕಾರವೇ ನೋಡಬೇಕು ಎಂದರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರತಿಪಕ್ಷ ನಾಯಕರ ವಿರುದ್ಧ ಪುರಾವೆ ಇವೆ. ಲೋಕಾಯುಕ್ತ ಸಂಸ್ಥೆಯವರೇ ತನಿಖೆ ಮಾಡಿದ್ದರು. ಮೇಲ್ನೋಟಕ್ಕೆ ಆರೋಪ ಇದೆ ಅಂದಿದ್ದರು. ಆದರೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ. ಪಕ್ಷಪಾತ ಮಾಡುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು. ರಾಜ್ಯಪಾಲರು ತಕ್ಷಣ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ನಾನು ಅಸಮಾನತೆ ವಿರುದ್ಧ ಹೋರಾಡುವವನು, ಅದಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ: ಸಿಎಂ - CM Siddaramaiah Press Meet