ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಹಾಗೂ ದಸರಾದ ವಿಶೇಷಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ 'ಈಟಿವಿ ಭಾರತ'ದ ಜೊತೆ ಮಾತನಾಡಿ, ನಾಳೆ (ಗುರುವಾರ) ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15 ರಿಂದ 9.45 ರ ಶುಭ ವೃಶ್ಚಿಕ ಲಗ್ನದಲ್ಲಿ ಗಣ್ಯರು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪುಪ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ದೊರೆಯಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.
19 ಉಪ ಸಮಿತಿಗಳು ಎಲ್ಲಾ ಕಾರ್ಯಕ್ರಮಗಳ ಉಸ್ತುವರಿ ನೋಡಿಕೊಳ್ಳುತ್ತಿವೆ. ದಸರಾದ ವೇಳೆ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ಕುಸ್ತಿ, ಚಲನಚಿತ್ರೋತ್ಸವ , ವಸ್ತುಪ್ರರ್ದಶನ ನಾಳೆ ಉದ್ಘಾಟನೆಯಾಗಲಿವೆ. ಯುವ ದಸರಾಕ್ಕೆ ಪ್ರಸಿದ್ಧ ಕಲಾವಿದರು ಆಗಮಿಸಲಿದ್ದಾರೆ. ಈ ಬಾರಿ ಯುವ ದಸರಾವನ್ನು ನಗರದ ಹೊರ ವಲಯದಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಭಾಗದ ಆಸನಗಳಿಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಸಾರ್ವಜನಿಕರು ಉಚಿತವಾಗಿ ಯುವ ದಸರಾ ವೀಕ್ಷಣೆ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.