ದಾವಣಗೆರೆ: ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ದಾವಣಗೆರೆ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 200 ಹಾಗೂ 500 ಮುಖಬೆಲೆಯ ಒಟ್ಟು 7.70 ಲಕ್ಷ ಮೊತ್ತದ ನಕಲಿ ನೋಟು ಹಾಗೂ 43,000 ಮೌಲ್ಯದ ಅಸಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹರೀಶ್ (29), ತಳವಾರ ಕುಬೇರಪ್ಪ (58) ಹಾಗೂ ಮೈಸೂರು ಜಿಲ್ಲೆಯ ಸಂದೀಪ್(30), ಮನೋಜ್ ಗೌಡ (21), ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜೆ.ರುದ್ರೇಶ (39), ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೃಷ್ಣನಾಯ್ಕ (28) ಬಂಧಿತರು.
ಎಸ್ಪಿ ಉಮಾ ಪ್ರಶಾಂತ್ ಹೇಳಿದಿಷ್ಟು: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್, "ನಕಲಿ ನೋಟುಗಳ ಜಾಲದಿಂದ ಬೇಸತ್ತಿದ್ದ ದಾವಣಗೆರೆ ಖಾಕಿ ಪಡೆ, ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆ ಪ್ರಾರಂಭಿಸಿತ್ತು. ಜ. 17ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಕೂಗಳತೆ ದೂರದಲ್ಲಿ ನಕಲಿ ನೋಟುಗಳ ಚಲಾವಣೆ ಆಗುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ್ದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಾದ ಹರೀಶ್ ಹಾಗೂ ಕುಬೇರಪ್ಪನನ್ನು ಬಂಧಿಸಿದ್ದರು. ಆಗ ಆರೋಪಿಗಳ ಬಳಿ ಇದ್ದ 500 ರೂ ಮುಖಬೆಲೆಯ ಒಟ್ಟು 37,000 ರೂ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು." ಎಂದು ಹೇಳಿದರು.
"ಹರಿಹರ ಗ್ರಾಮಾಂತರ ಠಾಣೆಯ ಪಿಐ ಸುರೇಶ್ ಸಗರಿ ಹಾಗು ಪಿಐ ಅರವಿಂದ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಅವರು ನೀಡಿದ ಮಾಹಿತಿ ಆಧಾರದಲ್ಲಿ ನಂತರ ಮತ್ತೆ ನಾಲ್ವರು ಆರೋಪಿಗಳಾದ ಸಂದೀಪ್, ಮನೋಜ್ ಗೌಡ, ಜೆ.ರುದ್ರೇಶ್, ಕೃಷ್ಣನಾಯ್ಕ ಅವರನ್ನು ಬಂಧಿಸಲಾಯಿತು. ಇದರಲ್ಲಿ ಹರೀಶ್ ಹಾಗೂ ರುದ್ರೇಶ್, ಕುಬೇರಪ್ಪ ಮುಖ್ಯ ಕಿಂಗ್ಪಿನ್ ಆಗಿದ್ದಾರೆ. ಇವರು ಈ ಹಿಂದೆ ಕೆಲವು ಕೇಸ್ಗಳಲ್ಲಿ ಬಂಧನಗೊಂಡು ಜೈಲಿನಿಂದ ಬಿಡುಗಡೆಯಾಗಿದ್ದರು" ಎಂದು ತಿಳಿಸಿದರು.