ದಾವಣಗೆರೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆ.1) 11ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ನಿರ್ಮಲಾ ಸೀತಾರಾಮನ್ ಲೆಕ್ಕಾಚಾರದ ಮೇಲೆ ಬೆಣ್ಣೆನಗರಿ ಮಂದಿಯ ನಿರೀಕ್ಷೆ ಬೆಟ್ಟದಷ್ಟಿದೆ. ಪ್ರತಿ ಬಜೆಟ್ನಲ್ಲಿಯೂ ದಾವಣಗೆರೆ ಜನರಿಗೆ ನಿರಾಸೆ ಮೂಡಿಸಿಕೊಂಡು ಬರಲಾಗಿದೆ. ಈ ಬಜೆಟ್ನಲ್ಲಿ ದಾವಣಗೆರೆಗೆ ಬಂಪರ್ ಸಿಗಲಿದೆಯಾ? ಎಂಬ ನಿರೀಕ್ಷೆ ಇದೆ.
ಈ ಹಿಂದೆ ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್ ಸಹ ಕೇಂದ್ರ ಬಜೆಟ್‌ನಲ್ಲೇ ಸೇರ್ಪಡೆಯಾಗಿದೆ. ವರ್ಷದಿಂದ ವರ್ಷಕ್ಕೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ರೈಲ್ವೆ ಇಲಾಖೆಯ ನಿರೀಕ್ಷೆಗಳೂ ಹೆಚ್ಚಾಗಿವೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಮಂಡನೆ ಆಗಲಿರುವ ಮೊದಲ ಬಜೆಟ್ ಇದಾಗಿದೆ.
ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಅವರು ಮಾತನಾಡಿದರು (ETV Bharat) ಫುಡ್ ಪಾರ್ಕ್, ಎಕನಾಮಿಕ್ ಕಾರಿಡಾರ್, ಐಟಿಬಿಟಿ ಕಂಪನಿಯ ಕೂಗು :ಈ ಬಗ್ಗೆ ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಅವರು ಪ್ರತಿಕ್ರಿಯಿಸಿ, "ತುಮಕೂರು-ಚಿತ್ರದುರ್ಗ-ದಾವಣಗೆರೆಗೆ ನೇರ ರೈಲು ಮಾರ್ಗ ಕಾಮಗಾರಿ ಅವಶ್ಯಕತೆ ಇದೆ. ಹರಿಹರ-ಶಿವಮೊಗ್ಗ ರೈಲ್ವೆ ಸರ್ವೆ ನಡೆದಿದೆ, ಮಾರ್ಗ ಜಾರಿಯಾಗಬೇಕಿದೆ. ಚನ್ನಗಿರಿ, ಚಿತ್ರದುರ್ಗ, ಚಿಕ್ಕಜಾಜೂರು ಮಾರ್ಗ ಮಾಡ್ಬೇಕಾಗಿದೆ. ಈ ಬಗ್ಗೆ ಕೇಂದ್ರ ಗಮನ ಹರಿಸಬೇಕಾಗಿದೆ. ದಾವಣಗೆರೆ ಕರ್ನಾಟಕದ ಕೇಂದ್ರ ಬಿಂದುವಾಗಿದ್ದು, ಇಲ್ಲಿ ಫುಡ್ ಪಾರ್ಕ್, ಎಕನಾಮಿಕ್ ಕಾರಿಡಾರ್, ಐಟಿಬಿಟಿ ಕಂಪನಿ ಅವಶ್ಯಕತೆ ಇದೆ. ಐಟಿಬಿಟಿ ಕಂಪನಿ ಬಂದರೆ ದಾವಣಗೆರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಕಡಿಮೆ ಆಗ್ಬೇಕಾಗಿದೆ. ಬಂಗಾರದ ದರ ಗಗನಕ್ಕೇರಿಕೆಯಾಗಿದೆ, ಕಡಿಮೆ ಆಗ್ಬೇಕಾಗಿದೆ. ಹೆಲ್ತ್ ಇನ್ಶ್ಯೂರೆನ್ಸ್ಗೆ ಜಿಎಸ್ಟಿ ಹಾಕ್ತಿದ್ದಾರೆ, ಅದು ಆಗ್ಬಾರದು" ಎಂದರು.
ವಿಮಾನ ನಿಲ್ಧಾಣದ ಕನಸು ಕನಸಾಗಿಯೇ ಉಳಿದಿದೆ :ಗೃಹಿಣಿ ರಾಜೇಶ್ವರಿ ಕೇಶವ ಅವರು ಪ್ರತಿಕ್ರಿಯಿಸಿ, "ನಾಳೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಜಿಎಸ್ಟಿ ಕಡಿಮೆ ಮಾಡ್ಬೇಕಾಗಿದೆ. ಇದರಿಂದ ನಮಗೆ ತೊಂದರೆ ಆಗ್ತಿದೆ. ಕಷ್ಟಪಟ್ಟು ದುಡಿಯುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ, ಸಂಬಳ ಏರಿಕೆ ಆಗ್ಬೇಕಾಗಿದೆ. ಬಂಗಾರದ ದರ ಏರಿಕೆ ಕಂಡಿದೆ. ಬಂಗಾರದ ದರ ಕಡಿಮೆ ಮಾಡಬೇಕಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಮದುವೆ ಮಾಡಲು ತೊಂದರೆ ಆಗ್ತಿದೆ. ಅಲ್ಲದೇ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಬೇಗ ಆಗ್ಬೇಕು, ಕೇಂದ್ರ ಸರ್ಕಾರ ವಿಮಾನ ನಿಲ್ಧಾಣ ಭರವಸೆ ನೀಡಿತ್ತು. ಅದು ಭರವಸೆಯಾಗಿಯೇ ಉಳಿದಿದೆ. ಇನ್ನು ಓದಿದ ಯುವಕರು ಮನೆ ಕೆಲಸ ಅರಸಿ ದೂರದ ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ, ದಾವಣಗೆರೆಗೆ ಐಟಿಬಿಟಿ ಕಂಪನಿ ಬರಲೇಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು" ಎಂದರು.
ಇದನ್ನೂ ಓದಿ :ನಾಳೆ ಕೇಂದ್ರ ಬಜೆಟ್: ರಾಜ್ಯದ ರೈಲ್ವೆ ವಲಯದ ನಿರೀಕ್ಷೆಗಳೇನು? - UNION BUDGET 2025