ದಾವಣಗೆರೆ: ಕಟ್ಟಿಕೊಂಡ ಹರಕೆ ಈಡೇರಿದ್ದಕ್ಕಾಗಿ ದಾವಣಗೆರೆಯ ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಹಲವು ವರ್ಷಗಳಿಂದ ಮಾಲೆ ಧರಿಸುತ್ತಿರುವ ಅವರು ಪ್ರತಿ ವರ್ಷ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಜಾತ್ಯತೀತ, ಧರ್ಮತೀತ ಮನೋಭಾವದಿಂದ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುವ ಅವರು ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸುತ್ತಾ ಭಾವೈಕ್ಯತೆ ಸಾರುತ್ತಿದ್ದಾರೆ.
ಹೌದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ನಿವಾಸಿ ಶಫೀವುಲ್ಲಾ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಶಫೀವುಲ್ಲಾ ಅವರು ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಶಫೀವುಲ್ಲಾ ಅವರು ಅಯ್ಯಪ್ಪಸ್ವಾಮಿ ದೇವರ ಪರಮಭಕ್ತರಾಗಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಆಗಿದ್ದರೂ ಅಯ್ಯಪ್ಪ ಸ್ವಾಮಿ ಮೇಲೆ ಅಪಾರವಾದ ಭಕ್ತಿಯನ್ನು ಇಟ್ಟುಕೊಂಡಿದ್ದಾರೆ.
ಕನಸಿನಲ್ಲಿ ಬಂದ ಅಯ್ಯಪ್ಪ ಸ್ವಾಮಿ:ಸದಾ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುವ ಇವರು ಅಂದುಕೊಂಡಿದ್ದು, ನೆರವೇರಿದ್ದಕ್ಕಾಗಿ ಮಾಲೆ ಧರಿಸುತ್ತಿದ್ದಾರೆ. ಜೀವನದಲ್ಲಿ ಉತ್ತಮವಾದ ಬೆಳವಣಿಗೆಗಳಾದ ಪರಿಣಾಮ ತಮ್ಮ ಸ್ನೇಹಿತರೊಂದಿಗೆ ಮಾಲೆ ಧರಿಸಿ ಶಬರಿಮಲೆಗೆ ತೆರಳಿ ದರ್ಶನ ಪಡೆಯುತ್ತಾರೆ. ಅಲ್ಲದೇ ಕನಸಿನಲ್ಲಿ ಅಯ್ಯಪ್ಪ ಸ್ವಾಮಿ ದೇವರು ಆಗಮಿಸಿ ಶಬರಿಮಲೆಗೆ ಬರುವಂತೆ ಶಫೀವುಲ್ಲಾ ಅವರಿಗೆ ಒತ್ತಾಯಸಿದ್ದರಂತೆ, ಆರ್ಥಿಕವಾಗಿ ಕುಗ್ಗಿದ್ದ ಶಫೀವುಲ್ಲಾ ಅವರನ್ನು ಸ್ನೇಹಿತರು ಹಣ ಹಾಕಿ ಶಬರಿಮಲೆಗೆ ಕರೆದುಕೊಂಡು ಹೋದಾಗಿನಿಂದ ಸ್ವಾಮಿಯ ಭಕ್ತನಾಗಿದ್ದೇನೆ ಎನ್ನುತ್ತಾರೆ ಶಫೀವುಲ್ಲಾ.