ಕರ್ನಾಟಕ

karnataka

ETV Bharat / state

ಅಂಚೆ ಚೀಟಿ ಸಂಗ್ರಹ: ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ ಉಡುಪಿಯ ನಿವೃತ್ತ ನೌಕರ - STAMP COLLECTIONS

ಶಿಕ್ಷಕರೊಬ್ಬರ ಮಾತಿಗೆ ಕಿವಿಗೊಟ್ಟು ಆರಂಭಿಸಿದ ಅಂಚೆಚೀಟಿ ಸಂಗ್ರಹ ಹವ್ಯಾಸ ಡೇನಿಯಲ್ ಮೊಂತೇರೊ ಅವರನ್ನು ಇಂದು ವಿಶ್ವಮಟ್ಟದಲ್ಲಿ ಗುರುತಿಸಿದೆ. ಈ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ಆದಿತ್ಯ ಐತಾಳ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

Daniel Monteiro and the stamp
ಡೇನಿಯಲ್ ಮೊಂತೇರೊ ಹಾಗೂ ಅಂಚೆಚೀಟಿ (ETV Bharat)

By ETV Bharat Karnataka Team

Published : Nov 21, 2024, 1:40 PM IST

Updated : Nov 21, 2024, 2:54 PM IST

ಉಡುಪಿ:ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ ಸಂಗ್ರಹ ಹವ್ಯಾಸದ ಮೂಲಕ ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನ ವಿಶ್ರಾಂತ ಕಚೇರಿ ಸಹಾಯಕ ಡೇನಿಯಲ್ ಮೊಂತೇರೊ ಅವರು ತಮ್ಮ ಪಕ್ಷಿಗಳ ಕುರಿತ ಅಂಚೆಚೀಟಿ ಸಂಗ್ರಹಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾರೆ. ಬ್ರಹ್ಮಾವರದ ಕುಮ್ರಗೋಡು ನಿವಾಸಿ ಡೇನಿಯಲ್ ಅವರು ಫ್ಲೋರಿನ್ ಮೊಂತೆರೊ ಮತ್ತು ದಿವಂಗತ ಪೀಟರ್ ಮೊಂತೇರೊ ಅವರ ಪುತ್ರ. ತಮ್ಮ 11ನೇ ವಯಸ್ಸಿನಲ್ಲಿ ಅಂಚೆಚೀಟಿಗಳನ್ನು ಸಂಗ್ರಹಿಸುವ ಒಲವನ್ನು ಬೆಳೆಸಿಕೊಂಡರು.

ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ ಉಡುಪಿಯ ನಿವೃತ್ತ ನೌಕರ (ETV Bharat)

ಶಿಕ್ಷಕರೊಬ್ಬರು ಹವ್ಯಾಸಗಳನ್ನು ಬೆಳೆಸುವ ಮಹತ್ವದ ಬಗ್ಗೆ ಹೇಳಿದ್ದ ಮಾತುಗಳನ್ನೇ ಗಟ್ಟಿಯಾಗಿಸಿಕೊಂಡು ಡೇನಿಯಲ್ ಅವರು ಅಂಚೆಚೀಟಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಅದೇ ಇಂದು ಅವರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದೆ. ಪರಿಸರದ ಬಗ್ಗೆ ಆಸಕ್ತಿ ಇದ್ದ ಕಾರಣ ಅವರು ಪಕ್ಷಿಗಳ ಅಂಚೆಚೀಟಿ ಸಂಗ್ರಹಿಸಲು ಆರಂಭಿಸಿದ್ದರು.

ಡೇನಿಯಲ್ ಮೊಂತೇರೊ ಅವರು ಸಂಗ್ರಹಿಸಿರುವ ಅಂಚೆಚೀಟಿ (ETV Bharat)

8 ಸಾವಿರಕ್ಕೂ ಅಧಿಕ ಪಕ್ಷಿ ಅಂಚೆಚೀಟಿ ಸಂಗ್ರಹ:ಡೇನಿಯಲ್ ಅವರ ಸಂಗ್ರಹದಲ್ಲಿ 163 ದೇಶಗಳ 18 ಸಾವಿರಕ್ಕೂ ಅಧಿಕ ಅಂಚೆಚೀಟಿಗಳಿದ್ದು, ಅದರಲ್ಲಿ 8 ಸಾವಿರಕ್ಕೂ ಅಧಿಕ ಪಕ್ಷಿಗಳ ಅಂಚೆಚೀಟಿಗಳಿವೆ. ಇವರ ಸಂಗ್ರಹದಲ್ಲಿ ಹೆಚ್ಚಾಗಿ ಜಲಪಕ್ಷಿಗಳ ಸಂಗ್ರಹವಿದೆ. ಜಲಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರ ಸಂಗ್ರಹದಲ್ಲಿ 5 ಸಾವಿರಕ್ಕೂ ಮಿಕ್ಕಿ ಬಾತುಕೋಳಿಗಳ ಅಂಚೆಚೀಟಿಗಳಿವೆ. ಜರ್ಮನಿಯ ಪಾಲ್ ಇರ್ವಿನ್ ಓಸ್ವಾಲ್ಡ್ ಅವರ ಸಂಗ್ರಹವನ್ನು ಇದು ಮೀರಿಸಿದೆ. ವಿಶ್ವದ ಮೊದಲ ಪಕ್ಷಿ ಸ್ಟಾಂಪ್, ಭಾರತದ ಮೊದಲ ಅಂಚೆಚೀಟಿ, ಥಾಯ್ಲೆಂಡಿನ ಎಂಬ್ರಾಯಡರಿ ಅಂಚೆಚೀಟಿ, ವಜ್ರದ ಅಂಚೆಚೀಟಿ ಹಾಗೂ ವಿವಿಧ ದೇಶಗಳ ವಿವಿಧ ಪಕ್ಷಿಗಳ ಅಂಚೆಚೀಟಿಗಳು ಇವರ ಸಂಗ್ರಹದಲ್ಲಿದೆ. ಸುಮಾರು 123 ದೇಶಗಳ 2 ಸಾವಿರಕ್ಕೂ ಅಧಿಕ ಮಹಾತ್ಮ ಗಾಂಧೀಜಿಯವರ ಅಂಚೆಚೀಟಿ ಸಂಗ್ರಹ ಇವರಲ್ಲಿದೆ.

ಡೇನಿಯಲ್ ಮೊಂತೇರೊ ಅವರು ಸಂಗ್ರಹಿಸಿರುವ ಅಂಚೆಚೀಟಿ (ETV Bharat)

21 ರಾಷ್ಟ್ರ, 13 ರಾಜ್ಯ ಪ್ರಶಸ್ತಿ, 10 ಅಂತಾರಾಷ್ಟ್ರೀಯ ಪ್ರಶಸ್ತಿ:ಅಂಚೆಚೀಟಿ ಸಂಗ್ರಹಣೆಯ ಜೊತೆಗೆ, ಡೇನಿಯಲ್ ಪಕ್ಷಿ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದು, ಹಲವಾರು ಪರಿಸರ ಸಂರಕ್ಷಣೆ ಅಭಿಯಾನಗಳಲ್ಲಿ ಭಾಗಿಯಾಗಿದ್ದಾರೆ. ಬೆಲ್ಜಿಯಂ, ಆಸ್ಟ್ರಿಯಾ, ದಕ್ಷಿಣ ಆಫ್ರಿಕಾ, ಸಿಂಗಾಪುರ, ಹಾಂಗ್ ಕಾಂಗ್, ಬ್ಯಾಂಕಾಕ್, ಕೊರಿಯಾ, ಇಂಡೋನೇಷಿಯಾ, ಚೀನಾ ಮತ್ತು ಭಾರತದಿಂದ 10 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 21 ರಾಷ್ಟ್ರ ಹಾಗೂ 13 ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅಲ್ಲದೆ 31 ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ ಮುಂತಾದವುಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಡೇನಿಯಲ್ ಅವರು ಈಗಾಗಲೇ ತಮ್ಮ ಬಾತುಕೋಳಿ-ವಿಷಯದ ಅಂಚೆಚೀಟಿಗಳ ಸಂಗ್ರಹಕ್ಕಾಗಿ ಎರಡು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ 3 ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಅಂಚೆಚೀಟಿಗಳ ಸಂಗ್ರಹಕಾರರ ರಾಷ್ಟ್ರೀಯ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದಾರೆ. ಇಲ್ಲಿಯವರೆಗೆ, ಡೇನಿಯಲ್ 162 ಅಂಚೆಚೀಟಿ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಮತ್ತು 31 ಪರಿಸರ ಸಂರಕ್ಷಣೆ ಅಭಿಯಾನಗಳನ್ನು ನಡೆಸಿದ್ದಾರೆ.

ಡೇನಿಯಲ್ ಮೊಂತೇರೊ ಅವರು ಸಂಗ್ರಹಿಸಿರುವ ಅಂಚೆಚೀಟಿ (ETV Bharat)

ಈಟಿವಿ ಭಾರತ ಕನ್ನಡ ಜೊತೆ ಮಾತನಾಡಿದ ಡೇನಿಯಲ್ ಮೊಂತೇರೊ, "ನನಗೆ 5ನೇ ತರಗತಿಯಿಂದ ಅಂಚೆಚೀಟಿ ಸಂಗ್ರಹಿಸುವ ಗೀಳು ಹತ್ತಿಕೊಂಡಿತು. ಅಲ್ಲಿಂದ ಆರಂಭಗೊಂಡ ಹವ್ಯಾಸದಿಂದ ಹಲವಾರು ಅಂಚೆಚೀಟಿಗಳನ್ನು ಸಂಗ್ರಹಿಸಿದ್ದೇನೆ. ಹಾಂಕ್​ ಕಾಂಗ್, ಚೀನಾ, ಸಿಂಗಾಪುರ, ಥಾಯ್ಲೆಂಡ್, ಕೊರಿಯಾ, ಬಾಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಅಂಚೆಚೀಟಿ ಪ್ರದರ್ಶಿಸಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದೇನೆ. ನನ್ನ ಈ ಹವ್ಯಾಸಕ್ಕೆ ಹೆಂಡತಿ, ಅಕ್ಕ ಭಾವಂದಿರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಪ್ರೋತ್ಸಾಹ ನೀಡಿದ್ದಾರೆ. ಗಿನ್ನೆಸ್ ದಾಖಲೆ ಮಾಡುವಲ್ಲಿ ಎಸ್.ಎಂ.ಎಸ್. ಕಾಲೇಜಿನವರು ಸಹಕರಿಸಿದ್ದು, ಹಲವಾರು ಪ್ರಶಸ್ತಿಗಳು ದೊರಕಿದೆ. ಅಂಚೆಚೀಟಿ ಸಂಗ್ರಹದಿಂದ ನನಗೆ ಪಕ್ಷಿಗಳ ಅಧ್ಯಯನ ಮಾಡಲು ಆಸಕ್ತಿ ಬಂದಿದ್ದು, ಮನೆಯ ಪರಿಸರದಲ್ಲಿರುವ ಸುಮಾರು 360ಕ್ಕೂ ಹೆಚ್ಚು ಪಕ್ಷಿಗಳ ಅಧ್ಯಯನ ಮಾಡುತ್ತಿದ್ದೇನೆ. ಅಂಚೆಚೀಟಿ ಸಂಗ್ರಹ ನಮ್ಮಲ್ಲಿ ಜ್ಞಾನ ವೃದ್ಧಿಯಾಗಲು ಸಹಕಾರಿ" ಎಂದು ಹೇಳಿದರು.

ಡೇನಿಯಲ್ ಮೊಂತೇರೊ ಅವರು ಸಂಗ್ರಹಿಸಿರುವ ಅಂಚೆಚೀಟಿ (ETV Bharat)

ಇದನ್ನೂ ಓದಿ:ಭರತನಾಟ್ಯದ 52 ಮುದ್ರೆ ಪ್ರದರ್ಶಿಸಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದ 3 ವರ್ಷದ ಮಗು

Last Updated : Nov 21, 2024, 2:54 PM IST

ABOUT THE AUTHOR

...view details