ರಾಮನಗರ : ''ಈ ಗೆಲುವು ನನ್ನದ್ದಲ್ಲ, ಕಾರ್ಯಕರ್ತರ ಗೆಲುವು. ರಾಜ್ಯದ ನಾಯಕರು ಹಾಗೂ ಕಾರ್ಯಕರ್ತ ಬಂಧುಗಳು ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅದಕ್ಕೋಸ್ಕರ ನಾನು ಎಲ್ಲರಿಗೂ ಹೃದಯಸ್ಪರ್ಶಿ ನಮಸ್ಕಾರ ಹೇಳುತ್ತೇನೆ. ಇದರಲ್ಲಿ ರಾಷ್ಟ್ರೀಯ ನಾಯಕರಾದಂತಹ ನರೇಂದ್ರ ಮೋದಿ, ಅಮಿತ್ ಶಾ, ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಇವರೆಲ್ಲರೂ ಉತ್ತಮವಾದ ಸಲಹೆ, ಮಾರ್ಗದರ್ಶನವನ್ನು ಕೊಟ್ಟಿದ್ದಾರೆ. ಜನ ಕೇವಲ ಮತಗಳನ್ನು ಕೊಟ್ಟಿಲ್ಲ. ಅವರ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಕಾರ್ಯಕರ್ತರ ಗೆಲುವು, ಮತದಾರರ ಗೆಲುವೆಂದು ಹೇಳಬೇಕಾಗುತ್ತೆ'' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಮಾಡುವೆ- ಡಿ.ಕೆ.ಸುರೇಶ್: ಇನ್ನು ಸೋಲಿನ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್, "ನನ್ನ ಕ್ಷೇತ್ರದ ಜನರ ತೀರ್ಮಾನವನ್ನು ಸ್ವಾಗತಿಸುತ್ತಾ ಡಾ.ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಹೋರಾಟ ಮುಂದುವರಿಸುತ್ತೇನೆ" ಎಂದು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಲು ಜನ ಮೂರು ಬಾರಿ ಅವಕಾಶ ನೀಡಿದ್ದರು. ನಾಲ್ಕನೇ ಬಾರಿಯ ಅಗ್ನಿಪರೀಕ್ಷೆಯಲ್ಲಿ ವಿರಾಮ ನೀಡಿದ್ದಾರೆ. ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ನನಗೆ ಮತ ಹಾಕಿರುವ, ಪಕ್ಷಕ್ಕಾಗಿ ಕೆಲಸ ಮಾಡಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ'' ಎಂದರು.
''ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಇತರೆ ನಾಯಕರಿಗೂ ಧನ್ಯವಾದ ತಿಳಿಸುತ್ತೇನೆ. ಕನ್ನಡಿಗರ ಧ್ವನಿಯಾಗಿ, ಕ್ಷೇತ್ರದ ಅಭಿವೃದ್ಧಿಗೆ ನಾನು ಕೆಲಸ ಮಾಡಿದ್ದೇನೆ. ಜನ ಹೊಸಬರಿಗೆ ಅವಕಾಶ ನೀಡಿದೆ. ಅವರು ಉತ್ತಮವಾಗಿ ಕೆಲಸ ಮಾಡಲಿ. ರಾಜ್ಯಕ್ಕೆ, ಕ್ಷೇತ್ರಕ್ಕೆ ಒಳ್ಳೆಯದಾಗಲಿ'' ಎಂದು ತಿಳಿಸಿದರು.