ರಾಜ್ಯಸಭೆ ಚುನಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬೆಂಗಳೂರು:ಬಿಜೆಪಿ ಹಾಗೂ ಜೆಡಿಎಸ್‌ನವರು ಆತ್ಮಸಾಕ್ಷಿ ಮತಗಳನ್ನು ಕೇಳುತ್ತಿದ್ದರು. ಬಿಜೆಪಿಯವರೇ ಆತ್ಮಸಾಕ್ಷಿಯ ಮತ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ವಿಧಾನಸೌಧದ ಆವರಣದಲ್ಲಿಂದು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ತಮ್ಮ ಅಭ್ಯರ್ಥಿಯ ಗೆಲುವಿಗೆ ಬೇಕಾದ 45 ಮತಗಳನ್ನು ಇಟ್ಟುಕೊಂಡು ಉಳಿದ ಮತಗಳನ್ನು ಜೆಡಿಎಸ್‌ಗೆ ನೀಡಬಹುದಿತ್ತು. ಮೈತ್ರಿ ಅಭ್ಯರ್ಥಿ ನಿಲ್ಲಿಸಿದ್ದು ಬಿಜೆಪಿ ಬೆಂಬಲದೊಂದಿಗೆ ಅಲ್ಲವೇ?, ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲವೇ?, ಬಿಜೆಪಿ ತಮ್ಮ ಪಕ್ಷಕ್ಕೆ 48 ಮತಗಳನ್ನು ತೆಗೆದುಕೊಂಡು, ಜೆಡಿಎಸ್ ಪಕ್ಷವನ್ನು ಕೈಬಿಟ್ಟಿತು ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿರುವ ಕುರಿತು ಕೇಳಿದಾಗ, ಅಡ್ಡ ಮತದಾನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ನನ್ನ ಮತವನ್ನಷ್ಟೇ ನೋಡಿದ್ದೇನೆ. ಪಕ್ಷೇತರರ ಮತವನ್ನು ನಾನು ನೋಡಿಲ್ಲ. ಹೀಗಿರುವಾಗ ಅಡ್ಡ ಮತದಾನದ ಬಗ್ಗೆ ನನಗೇನು ಗೊತ್ತು?. ಬಿಜೆಪಿಯವರನ್ನೇ ಕೇಳಿ. ಅವರೇ ಅಲ್ಲವೇ ಆತ್ಮಸಾಕ್ಷಿ ಮತ ಕೇಳಿದ್ದು ಎಂದರು.
ನಿಮ್ಮ ಪಕ್ಷಕ್ಕೆ ಆತ್ಮಸಾಕ್ಷಿ ಮತ ಬಂದಿದ್ದರೆ ಆ ಶಾಸಕರಿಗೆ ಕಾನೂನಾತ್ಮಕವಾಗಿ ಎದುರಾಗುವ ಸಮಸ್ಯೆಗೆ ರಕ್ಷಣೆ ಇರುತ್ತದೆಯೇ ಎಂಬ ಪ್ರಶ್ನೆಗೆ, ಸಮಯ ಬರಲಿ, ಮಾತನಾಡೋಣ. ಈಗಲೇ ಎಲ್ಲವೂ ಬೇಡ. ಅಡ್ಡ ಮತದಾನದ ಬಗ್ಗೆ ಸ್ಪೀಕರ್ಗೆ ದೂರು ನೀಡಿದ ವಿಚಾರವೂ ನನಗೆ ಗೊತ್ತಿಲ್ಲ. ಸೋಮಶೇಖರ್ ಅವರು ಅವರ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದಾರೆ. ಈ ಚುನಾವಣೆ ಮೈತ್ರಿ ಸರಿಯೋ? ಸರಿಯಲ್ಲವೋ? ಎಂಬ ವಿಚಾರಕ್ಕೆ ಸಂಬಂಧಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಮತದಾರರು, ಶಾಸಕರು, ಪದವೀಧರರು, ಶಿಕ್ಷಕರು ಒಪ್ಪಬೇಕು. ಶಿಕ್ಷಕರು ಈಗಾಗಲೇ ತಿರಸ್ಕರಿಸಿದ್ದಾರೆ. ಇನ್ನು ಶಾಸಕರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡೋಣ ಎಂದು ಹೇಳಿದರು.
ಸೋಲು-ಗೆಲುವು ಮುಖ್ಯವಲ್ಲ, ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸಂಖ್ಯಾಬಲ ಸ್ವಲ್ಪ ಹೆಚ್ಚೂ ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಅಂತಾ ನಮಗೆ ಗೊತ್ತಿದೆ. ನಾವಾಗಿರುವುದಕ್ಕೆ ಸುಮ್ಮನಿದ್ದೇವೆ. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಹೈಡ್ರಾಮ ನಡೆದರೆ ಮಾತ್ರ ಅನಿರೀಕ್ಷಿತ ಅಭ್ಯರ್ಥಿ ಗೆಲ್ಲಲು ಸಾಧ್ಯ!