ಬೆಂಗಳೂರು :ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಅವರ ಪಕ್ಷದ ಆಂತರಿಕ ಸಂಘರ್ಷವೇ ಹೊರತು ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಡಿ. ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರನ್ನ ಮಣಿಸಲು ಶ್ರೀರಾಮುಲು ಅವರನ್ನ ಕಾಂಗ್ರೆಸ್ಗೆ ಸೆಳೆಯುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಡಿಸಿಎಂ ಡಿ. ಕೆ ಶಿವಕುಮಾರ್ ಈ ಸ್ಪಷ್ಟನೆ ನೀಡಿದ್ದಾರೆ.
ಅರಮನೆ ಆವರಣದಲ್ಲಿ ಇಂದು ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರೇ ಬಹುಶಃ ಪಕ್ಷಕ್ಕೆ ಕಳುಹಿಸಬೇಕು ಎಂದು ಪ್ರಯತ್ನಿಸುತ್ತಿರಬಹುದು ಎಂದರು.
ಜನಾರ್ದನ ರೆಡ್ಡಿ ಹೇಳಿದ್ದೇನು ?:ಇದಕ್ಕೂ ಮುಂಚಿತವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಶಾಸಕ ಜನಾರ್ಧನ ರೆಡ್ಡಿ ಅವರು, ಪಕ್ಷ ಬಿಡೋದು ರಾಮುಲು ವೈಯಕ್ತಿಕ ವಿಚಾರ. ಪಕ್ಷ ಬಿಟ್ಟು ಹೋದ್ರೆ ಹೋಗಲಿ. ಆದರೆ ನನ್ನ ಮೇಲೆ ಆರೋಪ ಮಾಡಿ ಹೋಗೋದು ಸರಿಯಲ್ಲ. ಅವರು ಕಾಂಗ್ರೆಸ್ಗೆ ಹೋಗ್ತಾರಾ ಇನ್ನೆಲ್ಲಿಗೆ ಹೋಗ್ತಾರೆ ಅವರಿಗೆ ಬಿಟ್ಟಿದ್ದು. ಡಿಕೆಶಿ ಅವರು ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ರಾಮುಲುನ ಪಕ್ಷಕ್ಕೆ ಹೇಗಾದರೂ ಕರೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ರಾಮುಲುಗೆ ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಡಿಕೆಶಿ ಅವರನ್ನು ಕರೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಕುರಿತು ಬಳ್ಳಾರಿ ಭಾಗದಲ್ಲೆಲ್ಲ ಜನ ಮಾತಾಡ್ತಿದ್ದಾರೆ. ಇಡೀ ಬಳ್ಳಾರಿಯಲ್ಲಿ ಇದರ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ ಎಂದು ಹೇಳಿದ್ದರು.