ಬೆಂಗಳೂರು:ನೀವು ನಾಯಕರಾಗಿ ಬೆಳೆಯಬೇಕಾದರೆ ಪ್ರತೀ ಬೂತ್ನಲ್ಲಿ ತಲಾ ಐದು ಮಂದಿ ಯುವಕರಿಗೆ ಜವಾಬ್ದಾರಿ ನೀಡಿ ಪಕ್ಷದ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡಬೇಕು. ಈ ಮೂಲಕ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಮುನ್ನಡೆ ತಂದುಕೊಡಬೇಕು. ನನಗೆ ಅಥವಾ ಬೇರೆಯವರಿಗೆ ನೀವು ಜಿಂದಾಬಾದ್ ಹಾಕುವುದು ಬೇಡ. ವ್ಯಕ್ತಿ ಪೂಜೆ ಬಿಟ್ಟು ಪಕ್ಷಪೂಜೆ ಮಾಡಬೇಕು ಎಂದು ಯುವ ಕಾರ್ಯಕರ್ತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ಕೊಟ್ಟರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಯುವ ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಪದಗ್ರಹಣ ಹಾಗೂ ಯುವ ನ್ಯಾಯ ಗ್ಯಾರಂಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ದೊಡ್ಡ ಇತಿಹಾಸವುಳ್ಳ ಪಕ್ಷ. ಈ ಹಿಂದೆ ದೇಶದಲ್ಲಿ 21 ವರ್ಷದವರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದರು. ರಾಜೀವ್ ಗಾಂಧಿ ಯುವಕರ ಮೇಲೆ ನಂಬಿಕೆ ಇಟ್ಟು ಈ ಹಕ್ಕನ್ನು 18 ವರ್ಷಕ್ಕೆ ಇಳಿಸಿದರು. ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಬಿಜೆಪಿ ನಾಯಕರೆಲ್ಲರೂ ಈ ನಿರ್ಧಾರವನ್ನು ಟೀಕೆ ಮಾಡುತ್ತಿದ್ದರು. ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗುತ್ತಿದೆ ಎಂದು ಟೀಕಿಸಿದ್ದರು. ಆದರೆ ರಾಜೀವ್ ಗಾಂಧಿ ಯುವಕರ ಮೇಲೆ ಅಚಲ ನಂಬಿಕೆ ಇಟ್ಟಿದ್ದರು ಎಂದರು.
ಮುಂದುವರೆದು, ವಿನಯ್ ಕುಮಾರ್ ಸೊರಕೆ ಅವರಿಗೆ 1985ರಲ್ಲೇ ಟಿಕೆಟ್ ನೀಡಲಾಗಿತ್ತು. ನಾನೂ ಸೇರಿದಂತೆ ಯುವ ಸಂಘಟನೆಯಲ್ಲಿದ್ದ ನಮಗೆ ಪಕ್ಷ ಟಿಕೆಟ್ ನೀಡಿತ್ತು. ಈ ಬಾರಿಯ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಯುವಕರಿಗೆ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ತೀರ್ಮಾನ ಮಾಡಿಲ್ಲ. ವಿಧಾನಸಭೆಯಲ್ಲೂ 53 ಮಂದಿ ಯುವಕರಿಗೆ ಪಕ್ಷ ಟಿಕೆಟ್ ನೀಡಿತ್ತು. ಯುವಕರು ಹಾಗೂ ಮಹಿಳೆಯರು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ವಿಶ್ವಾಸ ನನಗಿತ್ತು. ಅದೇ ಕಾರಣಕ್ಕೆ ಮಹಿಳೆಯರಿಗಾಗಿ ಶಕ್ತಿ, ಗೃಹಲಕ್ಷ್ಮಿ ಯೋಜನೆ ಯುವಕರಿಗಾಗಿ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದು, ನಂತರ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿತ್ತು ಎಂದು ಟೀಕಿಸಿದರು.
ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಗೌಡ ಅಧಿಕಾರ ಸ್ವೀಕಾರ:ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ನೂತನ ಕಾರ್ಯಾಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥ ಗೌಡ ಬುಧವಾರ ಅಧಿಕಾರ ಸ್ವೀಕರಿಸಿದರು. ಎರಡು ಬಾರಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಂಜುನಾಥ್ ಗೌಡ ಈಗ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ವೇಳೆ ಮಾತನಾಡಿದ ಮಂಜುನಾಥ ಗೌಡ, ಯಾರೂ ಇರಲಿ, ಇಲ್ಲದಿರಲಿ ಪಕ್ಷ ಮುನ್ನಡೆಯುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಕೆಪಿಸಿಸಿ ಅಧ್ಯಕ್ಷರು ಯಾವಾಗಲೂ ಹೇಳುತ್ತಾರೆ. ಅವರ ಮಾತು ನಿಜ. ನಾವೆಲ್ಲಾ ಅವರ ಕೈ ಬಲಪಡಿಸೋಣ. ಪಕ್ಷ ಸಂಘಟಿಸೋಣ. ನಾನು ಈ ಮಟ್ಟಕ್ಕೆ ಬೆಳೆಯಲು ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದ ಕಾರಣ ಎಂದು ತಿಳಿಸಿದರು.
ಇದನ್ನೂ ಓದಿ:ನನ್ನ ಗೆಲುವನ್ನ ಜನ ತೀರ್ಮಾನ ಮಾಡುತ್ತಾರೆ: ಹೆಚ್ ಡಿ ಕುಮಾರಸ್ವಾಮಿ - H D Kumaraswamy