ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಫೆಂಗಲ್ ಚಂಡಮಾರುತದ ಎಫೆಕ್ಟ್, ಮೂರ್ನಾಲ್ಕು ದಿನ ಮಳೆ​ ಸಾಧ್ಯತೆ: ಮುಂಜಾಗ್ರತಾ ಕ್ರಮಕ್ಕೆ ಪಾಲಿಕೆ ಆಯುಕ್ತರ ಸೂಚನೆ!

ನಾಳೆ ರಜೆಯಿದ್ದರೂ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಎಲ್ಲಾ ವಲಯ ಅಧಿಕಾರಿಗಳು, ಅಭಿಯಂತರರು ತಮ್ಮ ವಲಯ ವ್ಯಾಪ್ತಿಯಲ್ಲಿ ಹಾಜರಿದ್ದು, ಮಳೆಯಾಗುವ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

BBMP Commissioner Tushar Girinath
ಮಳೆ, ಸಂಗ್ರಹ ಚಿತ್ರ (IANS)

By ETV Bharat Karnataka Team

Published : Nov 30, 2024, 6:02 PM IST

ಬೆಂಗಳೂರು: "ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಫೆಂಗಲ್ ಚಂಡಮಾರುತ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಇಂದು ವರ್ಚ್ಯುಯಲ್ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, "ಆಯಾ ವಲಯ ವ್ಯಾಪ್ತಿಯ ಎಲ್ಲಾ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು" ಎಂದು ಸೂಚನೆ ನೀಡಿದರು.

3 ರಿಂದ 4 ದಿನಗಳ ಕಾಲ ಮಳೆ ಬರುವ ಮುನ್ಸೂಚನೆ:"ಫೆಂಗಲ್ ಚಂಡಮಾರುತದ ಪರಿಣಾಮ ನಗರದಲ್ಲಿ 3 ರಿಂದ 4 ದಿನಗಳ ಕಾಲ ಮಳೆ ಬರುವ ಮುನ್ಸೂಚನೆಯಿದ್ದು, ಗಾಳಿ ಕೂಡಾ ಹೆಚ್ಚಾಗಿ ಬರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಮರ ಕಟಾವು ಮಾಡುವ ಎಲ್ಲ 28 ತಂಡಗಳನ್ನು ಸನ್ನದ್ಧರಾಗಿರಬೇಕು. ಮರಗಳು, ಮರದ ರೆಂಬೆ - ಕೊಂಬೆಗಳು ಬಿದ್ದ ದೂರುಗಳು ಬಂದ ಕೂಡಲೇ ಸ್ಥಳಕ್ಕೆ ತೆರಳಿ ತೆರವುಗೊಳಿಸುವ ಕೆಲಸ ಮಾಡಬೇಕು" ಎಂದು ಸೂಚನೆ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ:"ಆಯಾ ವಲಯ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ನಿಲ್ಲುವ ಸ್ಥಳದಲ್ಲಿ ಯಂತ್ರೋಪಕರಣಗಳು, ಪಂಪ್‌ಗಳನ್ನು ಸಿದ್ದವಾಗಿಟ್ಟುಕೊಂಡಿರಬೇಕು. ಈ ಹಿಂದೆ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಳು ಚೀಲಗಳನ್ನು ಇಟ್ಟುಕೊಂಡು, ಮಳೆಯಿಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು" ಎಂದು ಹೇಳಿದರು.

"ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ನಾಳೆ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಜಾ ದಿನವಾಗಿದ್ದರೂ ಎಲ್ಲಾ ವಲಯ ಅಧಿಕಾರಿಗಳು ಹಾಗೂ ಅಭಿಯಂತರರು ತಮ್ಮ ವಲಯ ವ್ಯಾಪ್ತಿಯಲ್ಲಿ ಹಾಜರಿದ್ದು, ಮಳೆಯಾಗುವ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಆಯಾ ವಲಯದ ಹಿರಿಯ ಅಧಿಕಾರಿಗಳು ಈ ಕುರಿತು ಮೇಲ್ವಿಚಾರಣೆ ಮಾಡಬೇಕು" ಎಂದು ಸೂಚನೆ ನೀಡಿದರು.

ರಾಜ ಕಾಲುವೆಗಳ ಪರಿಶೀಲನೆಗೆ ಸೂಚನೆ:"ರಾಜಕಾಲುವೆಗಳಲ್ಲಿ ಜೆಸಿಬಿಗಳ ಮೂಲಕ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಎಲ್ಲಾ ಕಡೆ ಜೆಸಿಬಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ರಸ್ತೆ ಬದಿಯ ಶೋಲ್ಡರ್ ಡ್ರೈನ್​ಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು" ಎಂದು ತಿಳಿಸಿದರು.

ಈ ವೇಳೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಡಾ.ಕೆ. ಹರೀಶ್ ಕುಮಾರ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸತೀಶ್, ಅರ್ಚನಾ, ಗಿರೀಶ್, ಕರೀಗೌಡ, ರಮೇಶ್, ರಮ್ಯಾ, ಸ್ನೇಹಲ್, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಕರಾವಳಿಯತ್ತ ಫೆಂಗಲ್​ ಚಂಡಮಾರುತ; ತಮಿಳುನಾಡಿನಲ್ಲಿ ಮಳೆ ಅಬ್ಬರ

ABOUT THE AUTHOR

...view details