ಬೆಳಗಾವಿ:ಕ್ರೂಸ್ ವಾಹನವೊಂದುಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹೊರವಲಯದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿತು.
ಚುಂಚನೂರು ಗ್ರಾಮದ ಕೆಂಚಪ್ಪ ಈರಣ್ಣವರ(50) ಸ್ಥಳದಲ್ಲೇ ಮೃತಪಟ್ಟರೆ, 16 ವರ್ಷದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಜನರು ಹತ್ತಿ ಬಿಡಿಸುವ ಕೆಲಸಕ್ಕೆಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸ್ವಗ್ರಾಮ ಚುಂಚನೂರಿಗೆ ತೆರಳುತ್ತಿದ್ದಾಗ ಅಪಘಾತ ಘಟಿಸಿದೆ.
ಕ್ರೂಸರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಸ್ಥಳಕ್ಕೆ ಸವದತ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಿಯಕರರೊಂದಿಗೆ ಸೇರಿ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ ತಾಯಂದಿರು: ಪ್ರಕರಣ ಭೇದಿಸಿದ ಪೊಲೀಸರು
ಪಾರ್ಟಿಗೆ ಹೋಗಿದ್ದ ಕೆಎಸ್ಆರ್ಟಿಸಿ ಚಾಲಕ ಶವವಾಗಿ ಪತ್ತೆ:ಗೆಳೆಯರೊಂದಿಗೆ ಹುಟ್ಟಹಬ್ಬದ ಪಾರ್ಟಿಗೆ ಹೋಗಿದ್ದ ಕೆಎಸ್ಆರ್ಟಿಸಿ ಚಾಲಕ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಶಿವಾಜಿ ನಗರದ ನಿವಾಸಿ ಬಶೀರ್ ಅಹ್ಮದ್ ಚಿಕ್ಕೋಡಿ(55) ಮೃತ ವ್ಯಕ್ತಿ.
ಬಿಮ್ಸ್ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಮುಂಭಾಗದಲ್ಲಿ ಆಟೋದಲ್ಲಿದ್ದ ಶವ ಕಂಡು ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಮತ್ತು ಎಪಿಎಂಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಶೀರ್ ಅಹ್ಮದ್ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬರ್ತ್ ಡೇ ಪಾರ್ಟಿ ಮಾಡಲು ಸ್ನೇಹಿತರ ಜೊತೆಗೆ ಹೋಗಿದ್ದರು. ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಸ್ನೇಹಿತರೇ ಕೊಲೆ ಮಾಡಿ, ಆಟೋದಲ್ಲಿ ಶವವನ್ನು ಬಿಮ್ಸ್ ಆಸ್ಪತ್ರೆ ಮುಂದೆ ಬಿಟ್ಟು ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಿಮ್ಸ್ ಆಸ್ಪತ್ರೆಯ ಮುಂದೆ ಸಂಬಂಧಿಕರು ಸೇರಿದ್ದು, ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.