ಕರ್ನಾಟಕ

karnataka

ETV Bharat / state

ಮುಂಬೈಯಿಂದ ಕೊಚ್ಚಿಗೆ ಕ್ರೂಸ್- ಸೋಮೇಶ್ವರದಲ್ಲಿ ಬಂದರು ನಿರ್ಮಾಣಕ್ಕೆ ಪ್ರಸ್ತಾವ: ಯು.ಟಿ.ಖಾದರ್ - U T Khader - U T KHADER

ಮುಂಬೈಯಿಂದ ಕೊಚ್ಚಿಗೆ ಕ್ರೂಸ್ ಆರಂಭವಾಗಲಿದ್ದು, ಸೋಮೇಶ್ವರದಲ್ಲಿ ಬಂದರು ನಿರ್ಮಾಣಕ್ಕೆ ಪ್ರಸ್ತಾವ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

Mumbai to Kochi  Cruise  port at Someshwar  Dakshina Kannada
ಸ್ಪೀಕರ್ ಯು.ಟಿ.ಖಾದರ್ (ETV Bharat)

By ETV Bharat Karnataka Team

Published : Jun 14, 2024, 7:52 PM IST

ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿ (ETV Bharat)

ಮಂಗಳೂರು:ಕೇಂದ್ರ ಸರಕಾರ ಮಂಬೈನಿಂದ ಕೊಚ್ಚಿಗೆ ಕ್ರೂಸ್ (ಪ್ರಯಾಣಿಕ ಹಡಗು ಸೇವೆ) ಆರಂಭಿಸಲಿದೆ. ಇದಕ್ಕೆ ಮಂಗಳೂರಿನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿ ಪ್ರವಾಸೋದ್ಯಮ ಆಕರ್ಷಿಸುವ ಪ್ರಸ್ತಾವ ಇದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಬೈನಿಂದ ಕೊಚ್ಚಿಗೆ ಹೋಗುವ ಕ್ರೂಸ್​ಗೆ ಸೋಮೇಶ್ವರದಲ್ಲಿ ನಿಲುಗಡೆಗೆ ಮಾಡಲು ಪೂರಕವಾದ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಪ್ರದೇಶ ಪ್ರಯಾಣಿಕ ಹಡಗು ತಂಗುದಾಣ ನಿರ್ಮಿಸಲು ಪ್ರಶಾಂತವಾದ ಹಾಗೂ ಪ್ರವಾಸಿ ತಾಣವಾಗಿ ರೂಪಿಸಲು ಉತ್ತಮ ಸ್ಥಳವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ ಎಂದರು.

ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆ, ಚರ್ಚೆ ನಡೆದಿದೆ. ಸಮುದ್ರ ಕಿನಾರೆಯಲ್ಲಿ ಶಾಶ್ವತ ಯೋಜನೆ ಮೂಲಕ ಮುಂಬಯಿ, ಚೆನ್ನೈ ಹಾಗೂ ಕೇರಳದಲ್ಲಿ ಮಾಡಿರುವ ಯೋಜನೆ ಫಲಪ್ರದವಾಗಿಲ್ಲ. ಹಾಗಾಗಿ ತಜ್ಞರನ್ನು ಕರೆಸಿಕೊಂಡು ಈ ಕುರಿತು ಸಭೆಯಲ್ಲಿ ಸಲಹೆ ನೀಡಲಾಗಿದೆ. ಕಳೆದ ವರ್ಷ ಮನೆ ನಾಶ ಆಗದ ರೀತಿಯಲ್ಲಿ ಕ್ರಮ ವಹಿಸಲಾಗಿತ್ತು. ಈ ಬಾರಿಯೂ ಅಪಾಯಕಾರಿ ಜಾಗವನ್ನು ಗುರುತಿಸಿ ಕ್ರಮ ವಹಿಸಲು ಮುಂದಾಗಿದ್ದರೂ ಯಾವ ಜಾಗದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ ಎಂದು ಮುಂಚಿತವಾಗಿ ಹೇಳಲು ಸಾಧ್ಯವಾಗದೆ ತೊಂದರೆಯಾಗುತ್ತಿದೆ. ಬಟ್ಟಂಪಾಡಿಗೆ ಸಂಬಂಧಿಸಿ 2 ಪ್ರಸ್ತಾವ ಸಿದ್ಧವಾಗಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಮೂಗು ತೂರಿಸುವುದು ಬೇಡ: ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದ್ದು, ಅಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ ಎಂದು ಹೇಳಿದರು. ಬೋಳಿಯಾರ್​ನಲ್ಲಿ ಕೆಲವೇ ಕೆಲವು ಯುವಕರಿಂದ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಹೊರಗಿನವರು ಅಲ್ಲಿ ರಾಜಕೀಯ ಮಾಡಿ ಅಲ್ಲಿನ ವಾತಾವರಣವನ್ನು ಮತ್ತಷ್ಟು ಕೆಡಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದರು.

ಬೋಳಿಯಾರು ವಿಚಾರದಲ್ಲಿ ರಾಜಕೀಯ ಮಾಡಿದರೆ ಯಾರಿಗೂ ಒಂದು ಮತವೂ ಹೆಚ್ಚಾಗದು. ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷದವರು ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಆಗಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು ಎಂದರು.

ಭಾರತ್ ಮಾತಾಕಿ ಜೈ ಎಂದು ಯಾರೂ ಬೇಕಾದ್ರೂ ಹೇಳಬಹುದು. ಅದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಅಲ್ಲಿ ಏನೋ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಪೊಲೀಸರು ಸಿಸಿಟಿವಿ ಕ್ಯಾಮೆರಾದ ಮೂಲಕ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂರು ಮಂದಿ ಬೈಕಿನಲ್ಲಿ ಬಂದು ಪ್ರಚೋದನಕಾರಿ ಘೋಷಣೆ ಕೂಗುವ ಉದ್ದೇಶವೇನು?, ಇದು ತಪ್ಪು. ಇದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿಕೊಂಡು ಹಲ್ಲೆ ಮಾಡಿರುವ ಕೃತ್ಯವೂ ತಪ್ಪೇ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಲಿ ಪ್ರಚೋದನಕಾರಿ ಮಾತುಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಪೊಲೀಸ್ ಇಲಾಖೆಯಿಂದ ನ್ಯಾಯ ದೊರತ್ತಿಲ್ಲ ಎಂದು ನನ್ನ ಬಳಿ ಬಂದರೆ ಈ ಬಗ್ಗೆ ಖಂಡಿತಾ ನಾನು ಪರಿಶೀಲಿಸುತ್ತೇನೆ. ನನಗೆ ಅಂತಹ ಯಾವುದೇ ದೂರು ಬಂದಿಲ್ಲ. ವಾಟ್ಸ್ ಆ್ಯಪ್ ವಾಯ್ಸ್ ಮೆಸೇಜ್ ಮೂಲಕ ಯಾರೋ ಹೇಳಿಕೊಂಡು ತಿರುಗಾಡುತ್ತಿದ್ದರೆ ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ತಲೆಮರೆಸಿಕೊಂಡಾಗ ವಿಚಾರಣೆಗಾಗಿ ಪೊಲೀಸರು ಕರೆದರೆ ಅದನ್ನು ದೊಡ್ಡ ವಿಚಾರ ಮಾಡಬೇಕಾಗಿಲ್ಲ ಎಂದು ಖಾದರ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಧ್ವನಿ ಸಂದೇಶ ಹಾಕಿ ಜನರನ್ನು ದಾರಿತಪ್ಪಿಸುವವರ ಮೇಲೂ ಪೊಲೀಸರು ಕ್ರಮ ವಹಿಸಬೇಕು. ಇಂತಹ ಘಟನೆಗಳ ಸಂದರ್ಭ ರಾಜಕಾರಣಿಗಳು ಅಲ್ಲಿ ಭೇಟಿ ನೀಡಿದಾಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಭೇಟಿ ನೀಡಿಲ್ಲ. ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿಸಿದವರನ್ನು ನಾವು ನೋಡಬೇಕೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪೀಕರ್ ಖಾದರ್ ಪ್ರಶ್ನಿಸಿದರು.

ಅಲ್ಲಿನ ಜನರನ್ನು ಅವರಷ್ಟಕ್ಕೆ ಬಿಡಿ. ಪೊಲೀಸರು ಹಾಗೂ ಜನರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಇಂತಹ ವಿಚಾರಗಳಿಗೆ ತಲೆಹಾಕಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಬೆಂಬಲ ನೀಡುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡುವುದು ಮಾಡಿದರೆ, ಮತ್ತೆ ಗೊಂದಲ ಆಗುತ್ತದೆ. ನಾನೂ ಸೇರಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು ಎಂದು ಯು.ಟಿ.ಖಾದರ್ ತಾಕೀತು ಮಾಡಿದರು.

ನನ್ನನ್ನು ಕ್ಷೇತ್ರದಲ್ಲಿ ಸೋಲಿಸಲು ಪ್ರಯತ್ನಿಸಿದವರು ಬೋಳಿಯಾರ್ ಘಟನೆಗೆ ಸಂಬಂಧಿಸಿ 'ಶಾಸಕರು ಕಾಣೆಯಾಗಿದ್ದಾರೆ' ಎಂಬ ಸಂದೇಶ ಹರಿಬಿಟ್ಟು ಸಂತೋಷ ಪಡುತ್ತಿದ್ದಾರೆ. ನಾನು ಅವರಿಗೆ ಶುಭಾಶಯ ಹೇಳುತ್ತೇನೆ. ಅವರು ನನ್ನ ಬಳಿ ಬಂದು ನಾನೇ ಆ ಸಂದೇಶ ಹಾಕಿರುವುದಾಗಿ ಹೇಳಿದರೆ ಅವರಿಗೆ ನಗದು ಬಹುಮಾನವನ್ನೂ ನೀಡಲಿದ್ದೇನೆ. ಒಳ್ಳೆಯವರಿಗೆ, ಅಗತ್ಯವುಳ್ಳವರಿಗೆ ಖಾದರ್ ಯಾವತ್ತೂ ಸಿಗುತ್ತಾರೆ ಎಂದು ಸ್ಪೀಕರ್​ ಹೇಳಿದರು.

ಉಳ್ಳಾಲ ಕ್ಷೇತ್ರಕ್ಕೆ ಕುಡಿಯುವ ನೀರು ಯೋಜನೆ:ಚುನಾವಣೆ ಸಂದರ್ಭ ಕ್ಷೇತ್ರದ ಜನರಿಗೆ 24x7 ಕುಡಿಯುವ ನೀರು ಒದಗಿಸುವ ಯೋಜನೆ ಮಾಡುವ ಮಾತು ಕೊಟ್ಟಿದ್ದೆ. ಅದರಂತೆ 249 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಥಮ ಹಂತದ ಉದ್ಘಾಟನೆ ಹಾಗೂ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರ ಮೂಲಕ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂ.ಗಳಲ್ಲಿ ಸಜೀಪದಲ್ಲಿ ಜಾಕ್ವೆಲ್​ನಿಂದ ಕೊಣಾಜೆಗೆ ನೀರನ್ನು ಹಾಯಿಸಿ ಶುದ್ಧೀಕರಣಗೊಂಡು ಪೈಪ್ಲೈನ್ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಚೆಂಬುಗುಡ್ಡೆಯಲ್ಲಿ ಕ್ಷೇತ್ರದ ನಗರ ಭಾಗಕ್ಕೆ ನೀರು ಪೂರೈಸಲು 70 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಿದೆ. 2ನೇ ಹಂತದಲ್ಲಿ ಗ್ರಾಮೀಣ ಮಟ್ಟಕ್ಕೂ ನೀರು ಪೂರೈಕೆಗಾಗಿ ಮುಖ್ಯ ಟ್ಯಾಂಕ್​ಗೆ ನೀರು ಹರಿಸಿ ಅಲ್ಲಿಂದ ಸಣ್ಣ ಟ್ಯಾಂಕ್‌ಗಳಿಂದ ಮನೆಗಳಿಗೆ ಸಂಪರ್ಕ ನೀಡುವ ಕೆಲಸ ಆಲಿದೆ. ಇದಕ್ಕಾಗಿ 386 ಕೋಟಿ ರೂ.ಗಳ ಅನುದಾನ ಬಿಡುಗಡೆ ಆಗಿದೆ ಎಂದು ಅವರು ಹೇಳಿದರು. ಇದರ ಜೊತೆಯಲ್ಲಿ ರಸ್ತೆ ಹಾಗೂ ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಇದಲ್ಲದೆ, ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:60 ಶಾಸಕರು ರಾಜೀನಾಮೆ ಕೊಡುವುದು ಹುಡುಗಾಟವೇ?: ಸಚಿವ ಎಂ.ಬಿ.ಪಾಟೀಲ್ - M B Patil

ABOUT THE AUTHOR

...view details