ಕರ್ನಾಟಕ

karnataka

ಬೆಳಗಾವಿಯಲ್ಲಿ 700 ಕೋಟಿ ರೂ. ಮೌಲ್ಯದ ಬೆಳೆಹಾನಿ: ಬಂದಿದ್ದು ಕೇವಲ 70 ಕೋಟಿ ಪರಿಹಾರ, ರೈತರ ಆಕ್ರೋಶ - Crop loss compensation

By ETV Bharat Karnataka Team

Published : 4 hours ago

ಈಗ ಸಿಕ್ಕಿರುವ ಪರಿಹಾರದ ಹಣ ರೈತರು ಬಿತ್ತನೆ ಮಾಡಿದ ವೆಚ್ಚಕ್ಕೂ ಸಾಕಾಗುವುದಿಲ್ಲ ಎಂದು ಬೆಳಗಾವಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

farmers anger against Govt
ರೈತರ ಆಕ್ರೋಶ (ETV Bharat)

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಭಾರೀ ಮಳೆಗೆ 700 ಕೋಟಿ ರೂ. ಮೌಲ್ಯದ ಬೆಳೆಹಾನಿ ಆಗಿದೆ. ಆದರೆ ಸರ್ಕಾರ ಮಾತ್ರ 70 ಕೋಟಿ ಪರಿಹಾರ ನೀಡಿದ್ದು, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಡೆಗೆ ರೈತಾಪಿ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.

ಹೌದು, ಎರಡು ತಿಂಗಳ ‌ಕಾಲ ಮುಂಗಾರು ಮಳೆ ಆರ್ಭಟಕ್ಕೆ ಗಡಿ ಜಿಲ್ಲೆ ಬೆಳಗಾವಿ ಜನ ತತ್ತರಿಸಿ ಹೋಗಿದ್ದಾರೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಪಾತ್ರದ 62 ಸಾವಿರ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಕಬ್ಬು, ಭತ್ತ, ಸೊಯಾಬಿನ್, ಹೆಸರು, ಮೆಕ್ಕೆಜೋಳ, ಅಲೂಗಡ್ಡೆ ಸೇರಿ ಬಹುತೇಕ ಮುಂಗಾರು ಬೆಳೆಗಳು ಮಳೆಯ ನೀರಿಗೆ ಆಹುತಿಯಾಗಿವೆ. ಮಳೆ ಕಡಿಮೆ ಆಗುತ್ತಿದ್ದಂತೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸರ್ವೇ ಕಾರ್ಯ ಮಾಡಲಾಗಿದ್ದು, ಸರ್ವೇ ವೇಳೆ 24,500 ಸಾವಿರ ಹೆಕ್ಟೇರ್ ಕೃಷಿ ಜಮೀನು ಹಾನಿಯಾಗಿರುವ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

ಇನ್ನು ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಬೆಳಗಾವಿ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿದೆ. ಕಳೆದ ವರ್ಷ ಬರದಿಂದ ಮುಂಗಾರು-ಹಿಂಗಾರು ಬೆಳೆ ಬಾರದೇ ಸಂಕಷ್ಟ ಅನುಭವಿಸಿದ್ದ ರೈತರಿಗೆ, ಈಗ ಅತೀವೃಷ್ಟಿಯಿಂದ ಬೆಳೆಹಾನಿಯಾಗಿದೆ. ಬಿತ್ತನೆಗೆ ಮಾಡಿದ ವೆಚ್ಚಕ್ಕೂ‌ ಈ ಪರಿಹಾರದ ಹಣ ಸಾಕಾಗುವುದಿಲ್ಲ ಎಂಬುದು ರೈತರ ಅಳಲಾಗಿದೆ.

ಪ್ರತೀ ಹೆಕ್ಟೇರ್‌ ನೀರಾವರಿ ಜಮೀನಿಗೆ 17 ಸಾವಿರ, ಮಳೆಯಾಶ್ರಿತ ನೀರಾವರಿ ಜಮೀನಿಗೆ 8 ಸಾವಿರ ರೂ. ಪರಿಹಾರ ವಿತರಣೆ ಮಾಡಿದ್ದಾರೆ. ಒಬ್ಬ ರೈತನ ಎಷ್ಟೇ ಎಕರೆ ಬೆಳೆ ಹಾನಿಯಾದರೂ ಕೂಡ ಅವರಿಗೆ 2 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಇನ್ನು ಮಳೆಗೆ 338 ಮನೆಗಳು ಸಂಪೂರ್ಣ ಹಾನಿ, 567 ಭಾಗಶಃ, 323 ಮನೆಗಳಿಗೆ ಸ್ವಲ್ಪ ಹಾನಿಯಾಗಿರುವ ವರದಿಯಾಗಿದೆ‌.

"ಸಂಪೂರ್ಣ ಮನೆ ಹಾನಿಯಾದ 231 ಸಂತ್ರಸ್ತರಿಗೆ ತಲಾ ಒಬ್ಬರಿಗೆ 3 ಲಕ್ಷದಂತೆ 2.71 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 567 ಭಾಗಶಃ ಹಾನಿಯಾದ ಮನೆಗಳ ಪೈಕಿ 455 ಸಂತ್ರಸ್ತರಿಗೆ ತಲಾ ಒಬ್ಬರಿಗೆ 50 ಸಾವಿರದಂತೆ 1.36 ಕೋಟಿ ರೂ., 323 ಸ್ವಲ್ಪ ಹಾನಿಯಾದ ಮನೆಗಳ ಪೈಕಿ 257 ಸಂತ್ರಸ್ತರಿಗೆ 6 ಸಾವಿರದಂತೆ 16 ಲಕ್ಷ ಪರಿಹಾರ ವಿತರಿಸಲಾಗಿದೆ. ಇನ್ನು ಒಂದು ವಾರದಲ್ಲಿ ಇನ್ನುಳಿದ ಸಂತ್ರಸ್ತರಿಗೂ ಪರಿಹಾರ ತಲುಪಿಸುತ್ತೇವೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಲಕ್ಷಾಂತರ ಹೆಕ್ಟೇರ್ ಪ್ರದೇಶದ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಹಾನಿಯಾಗಿದೆ. ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಈವರೆಗೆ ಶೇ.25ರಷ್ಟು ಸಂತ್ರಸ್ತರಿಗೂ ನೆರೆ ಪರಿಹಾರ ಮುಟ್ಟಿಲ್ಲ. 20 ವರ್ಷಗಳ ಹಿಂದಿನ ಎನ್​ಡಿಆರ್​ಎಫ್ ನಿಯಮಾವಳಿಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿರುವುದು ಎಷ್ಟು ಸರಿ? ಕಳೆದ 20 ವರ್ಷಗಳಲ್ಲಿ ಈಗ ಪೆಟ್ರೋಲ್, ಡೀಸೆಲ್ ಸೇರಿ ಎಲ್ಲಾ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರ ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.

ಮತ್ತೋರ್ವ ರೈತ ಮುಖಂಡ ಪ್ರಕಾಶ್​ ನಾಯಿಕ ಮಾತನಾಡಿ, "ಕೇಂದ್ರ ಸರ್ಕಾರ 9ನೇ ವೇತನದ ಆಯೋಗ, ರಾಜ್ಯ ಸರ್ಕಾರ 7ನೇ ವೇತನ ಆಯೋಗ ಜಾರಿ ಮಾಡುವ ಮೂಲಕ ಕಾರ್ಯಾಂಗವನ್ನು ಮೇಲ್ದರ್ಜೆಗೇರಿಸಿದೆ. ಆದರೆ, ಕಳೆದ ಐದು ವರ್ಷಗಳಿಂದ ಕೋವಿಡ್, ನೆರೆ, ಬರದಿಂದ ತತ್ತರಿಸಿರುವ ರೈತರ ನೆರವಿಗೆ ಸರ್ಕಾರಗಳು ಬಾರದಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಿಗಳು ಸರಿಯಾಗಿ ಬೆಳೆ ಹಾನಿ ಸರ್ವೇ ಮಾಡಿಲ್ಲ" ಎಂದು ಆರೋಪಿಸಿದರು.

ಇದನ್ನೂ ಓದಿ:ಕಳಪೆ ಬೀಜದಿಂದ ಬೆಳೆ ನಷ್ಟ: ಹಾಳಾದ ಆಲೂಗಡ್ಡೆ ಕಿತ್ತೆಸೆದು ಬೆಳಗಾವಿ ರೈತರ ಆಕ್ರೋಶ - Belagavi Farmers Protest

ABOUT THE AUTHOR

...view details