ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗುರುವಾರ ರಾತ್ರಿ ಶೃಂಗೇರಿಯ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಜೋರು ಮಳೆಯಾಯಿತು. ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಿಟ್ಟು-ಬಿಟ್ಟು ಸುರಿಯುತ್ತಿದ್ದ ಮಳೆ ಚುರುಕು ಪಡೆದಿದ್ದು ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದೆ. ಹೀಗೆಯೇ ಮುಂದುವರಿದರೆ ತುಂಗಾ ನದಿಯ ಇಕ್ಕೆಲಗಳ ತೋಟಗಳು ಜಲಾವೃತವಾಗುವ ಆತಂಕ ಎದುರಾಗಿದೆ.
ಚಾರ್ಮಡಿ ಘಾಟ್ ರಸ್ತೆಯಲ್ಲಿ ಬಿರುಕು: ತುಂಗಾ ನದಿಯಲ್ಲಿ ಭಾರೀ ಪ್ರಮಾಣದ ನೀರು (ETV Bharat) ಮಲೆನಾಡು ಭಾಗದಲ್ಲಿ ಚಾರ್ಮಾಡಿ ಹೆದ್ದಾರಿ, ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೊಸ ಕಾಮಗಾರಿ ನಡೆದ ಸ್ಥಳದಲ್ಲೇ ಬಿರುಕು ಕಂಡುಬಂದಿದೆ. 2019ರ ಮಳೆಗೆ ಕುಸಿದ ಜಾಗದಲ್ಲಿ ನಡೆದಿದ್ದ ಕಾಮಗಾರಿ ಈಗ ಮತ್ತೆ ಕುಸಿಯುವ ಭೀತಿ ಆವರಿಸಿದೆ. ಚಿಕ್ಕಮಗಳೂರು ವಿಭಾಗದ ನಾಲ್ಕೈದು ಸ್ಥಳಗಳಲ್ಲಿ ತಡೆಗೋಡೆಯಲ್ಲಿ ಬಿರುಕು ಮೂಡಿದ್ದು, 100-200 ಅಡಿ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಿದ ಜಾಗದಲ್ಲೇ ಈ ಪರಿಸ್ಥಿತಿ ಇದೆ.
ಚಾರ್ಮಡಿ ರಾಷ್ಟ್ರೀಯ ಹೆದ್ದಾರಿಯ ಅಧ್ವಾನ ಕಂಡು ಸ್ಥಳೀಯರು, ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ಬಿರುಕು ಬಿಟ್ಟಿರುವುದು ವಾಹನ ಸವಾರರಿಗೆ ಸರಿಯಾಗಿ ಕಾಣಿಸದೆ ಅಪಾಯ ಎದುರಾಗುವ ಸಂಭವವಿದೆ. ರಸ್ತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ (ETV Bharat) ಪಶ್ಚಿಮ ಘಟ್ಟಗಳ ಸಾಲಲ್ಲಿ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಭದ್ರಾ ನದಿ ಹರಿವಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಹೆಬ್ಬಾಳೆ ಸೇತುವೆಗೆ ಭದ್ರ ನಡೆ ಅಪ್ಪಳಿಸುತ್ತಿದ್ದು, ಅರ್ಧ-ಒಂದು ಅಡಿ ನೀರು ಬಂದರೂ ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದ್ದು, ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ.
ಮುಂಜಾಗೃತಾ ಕ್ರಮವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಇದರಿಂದಾಗಿ ಪೊಲೀಸರು ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಯಾವುದೇ ಕ್ಷಣದಲ್ಲೂ ಸೇತುವೆ ಮೇಲೆ ಭದ್ರಾ ನದಿ ನೀರು ಉಕ್ಕುವ ಸಾಧ್ಯತೆ ಇದ್ದು, ಕಳಸ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಮನೆ ಪಕ್ಕದ ತಡೆಗೋಡೆ ಕುಸಿದಿರುವುದು. (ETV Bharat) ಧರೆಗುರುಳಿದ ತಡೆಗೋಡೆ: ನಿರಂತರ ಮಳೆಗೆ ಕಳಸ ತಾಲೂಕಿನ ಕಂಚಿಗಾನೆಯ ಗ್ರಾ.ಪಂ.ಉಪಾಧ್ಯಕ್ಷ ರಂಗನಾಥ್ ಅವರ ಮನೆಯ ಪಕ್ಕದ ತಡೆಗೋಡೆ ಕುಸಿದುಬಿದ್ದಿದ್ದು, ಜೀಪ್ ಹಾಗೂ ಮೇಲ್ಛಾವಣಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು ಇನ್ನಷ್ಟು ಧರೆ ಕುಸಿಯುವ ಆತಂಕವಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ: 230ಕ್ಕೂ ಹೆಚ್ಚು ಜನರ ಸ್ಥಳಾಂತರ, ಸಹಾಯವಾಣಿ ತೆರೆದ ಜಿಲ್ಲಾಡಳಿತ - UTTARA KANNADA HEAVY RAIN