ಕರ್ನಾಟಕ

karnataka

ETV Bharat / state

ಠಾಣೆ ಮುಂದೆ ತಂದೆಯ ಶವವಿಟ್ಟು ಸಿಪಿಐ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹ - CPI PROTEST BY PLACING FATHER BODY

ತಂದೆ ಸಾವಿಗೆ ಹಾರೂಗೇರಿ ಠಾಣೆಯ ಪೊಲೀಸ್​ ಕಾರಣ ಎಂದು ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಅಶೋಕ್ ಸದಲಗಿ ಗಂಭೀರ ಆರೋಪ ಮಾಡಿದ್ದಾರೆ.

CPI protests by placing father's body in front of police station
ಠಾಣೆ ಮುಂದೆ ತಂದೆಯ ಶವವಿಟ್ಟು ಸಿಪಿಐ ಪ್ರತಿಭಟನೆ (ETV Bharat)

By ETV Bharat Karnataka Team

Published : Feb 8, 2025, 6:25 PM IST

ಚಿಕ್ಕೋಡಿ (ಬೆಳಗಾವಿ): ಜಮೀನು ವಿಚಾರದಲ್ಲಿ ಹಾರೂಗೇರಿ ಠಾಣೆಯ ಪೊಲೀಸರ ಕಿರುಕುಳಕ್ಕೆ ಮನನೊಂದು ತಮ್ಮ ತಂದೆ ಸಾವನ್ನಪ್ಪಿರುವುದಾಗಿ ಆರೋಪಿಸಿ, ಸಿಪಿಐ ಅಶೋಕ್ ಸದಲಗಿ ಎಂಬುವರು ತಂದೆಯ ಶವವನ್ನು ಹಾರೂಗೇರಿ ಪೊಲೀಸ್ ಠಾಣೆ ಮುಂದೆ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿ ಅಣ್ಣಪ್ಪ ಸದಲಗಿ (78) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ನಮ್ಮ ತಂದೆ ಸಾವಿಗೆ ಹಾರೂಗೇರಿ ಠಾಣೆಯ ಪೊಲೀಸರು ಕಾರಣ ಎಂದು ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಅಶೋಕ್ ಸದಲಗಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಠಾಣೆ ಮುಂದೆ ತಂದೆಯ ಶವವಿಟ್ಟು ಸಿಪಿಐ ಪ್ರತಿಭಟನೆ (ETV Bharat)

ಸಿಪಿಐ ಅಶೋಕ್ ಸದಲಗಿ ಮಾತನಾಡಿ, "ನಮ್ಮ ಕುಟುಂಬ ಹಾಗೂ ಸದಾಶಿವ ರಡ್ಡೆರಟ್ಟಿ ಎಂಬುವರ ನಡುವೆ 2 ಎಕರೆ 5 ಗುಂಟೆ ಜಮೀನು ವಿವಾದ ನಡೆದಿದ್ದು, ಜನವರಿ 10ರಂದು ಬಾಬು ನಡೋಣಿ, ಪ್ರತಾಪ್ ಹರೋಲಿ ಹಾಗೂ ವಸಂತ ಚೌಗಲಾ ಎಂಬುವರ ತಂಡ ಅಕ್ರಮವಾಗಿ ನಮ್ಮ ಜಮೀನಿಗೆ ಬಂದು ಪ್ರಶ್ನೆ ಮಾಡಿದ್ದನ್ನು ತಂದೆ ಅಣ್ಣಪ್ಪ ಸದಲಗಿ ಪ್ರಶ್ನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಅವರು ತಂದೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಬಳಿಕ ತಕ್ಷಣ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ತಂದೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದರು" ಎಂದು ದೂರಿದ್ದಾರೆ.

"ಅಲ್ಲದೆ ಜಮೀನು ಅಕ್ರಮ ಪ್ರವೇಶ ಮಾಡಿದ್ದವರು ನನ್ನ ಸಹೋದರನ ವಿರುದ್ಧ ದೂರು ನೀಡಿದಾಗ ಪಿಎಸ್ಐ ಆ ದೂರನ್ನು ದಾಖಲು ಮಾಡಿಕೊಂಡಿದ್ದರು. ಅಲ್ಲದೆ ದೂರಿನಲ್ಲಿ ಅಟ್ರಸಿಟಿ ಪ್ರಕರಣ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ" ಆಕ್ರೋಶಗೊಂಡ ಸಿಪಿಐ ನೇರವಾಗಿ ಶವವನ್ನು ಹಾರೂಗೇರಿ ಪೊಲೀಸ್ ಠಾಣೆ ಮುಂದೆ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಮನವೊಲಿಸಿದ ಬಳಿಕ, ಸಿಪಿಐ ಅಶೋಕ್ ಸದಲಗಿ ತಂದೆಯ ಶವವನ್ನು ಠಾಣೆಯಿಂದ ತೆಗೆದುಕೊಂಡು ಹೋಗಿ, ಶವಸಂಸ್ಕಾರ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್, "ಘಟನೆಯ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಕಳೆದ ರಾತ್ರಿಯೇ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದೆ. ಮೃತ ವ್ಯಕ್ತಿಗೆ ಕಳೆದ ಕೆಲವು ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯ ಹಿನ್ನೆಲೆಯಲ್ಲಿ ಸ್ಟಂಟ್ ಅಳವಡಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಮೃತರ ಮೇಲೆ ಪೊಲೀಸರು ಯಾವುದೇ ಹಲ್ಲೆ ನಡೆಸಿದ ದಾಖಲೆ ಇಲ್ಲ. ಕಳೆದ ಒಂಭತ್ತು ದಿನಗಳಿಂದಲೂ ಬೇರೆ ಬೇರೆ ಕಾರಣಕ್ಕೆ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಜನರು ಈ ರೀತಿಯಾಗಿ ಪೊಲೀಸರ ವಿರುದ್ಧ ಆರೋಪಿಸುತ್ತಿದ್ದಾರೆ. ಅವುಗಳ ಬಗ್ಗೆ ಕ್ರಮ ವಹಿಸುತ್ತೇವೆ. ಆದರೆ ಅವರ ಸಾವಿಗೆ ಹಾಗೂ ಪೊಲೀಸ್ ಇಲಾಖೆಗೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಅಕ್ರಮವಾಗಿ ಫೋನ್ ಕರೆ ದಾಖಲೆಗಳ ಸಂಗ್ರಹಣೆ ಆರೋಪ : ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್

ABOUT THE AUTHOR

...view details