ಕರ್ನಾಟಕ

karnataka

ETV Bharat / state

ಕೋವಿಡ್ ಅಕ್ರಮ: ಪಿಪಿಇ ಕಿಟ್ ಖರೀದಿ ಆರೋಪ, ಓರ್ವ ಅಧಿಕಾರಿ ಸಸ್ಪೆಂಡ್

ಕೋವಿಡ್ ಅಕ್ರಮ ಆರೋಪ ಕುರಿತಂತೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಅಂದಿನ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿದ್ದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ವಿಧಾನಸೌಧ
ವಿಧಾನಸೌಧ (ETV Bharat)

By ETV Bharat Karnataka Team

Published : Oct 7, 2024, 9:20 PM IST

ಬೆಂಗಳೂರು: ಪಿಪಿಇ ಕಿಟ್ ಮತ್ತು ಇತರೆ ಸಾಮಗ್ರಿಗಳ ಖರೀದಿಯಲ್ಲಿ ಆಗಿರುವ ಅಕ್ರಮಗಳ ಆರೋಪ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಈ ಮೂಲಕ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಕಾಂಗ್ರೆಸ್ ಸರ್ಕಾರ ಮೊದಲ ಕ್ರಮ ಕೈಗೊಂಡಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಆಗಿನ ಆರ್ಥಿಕ ಸಲಹೆಗಾರ ರಘು ಜಿ.ಪಿ ಅವರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಪ್ರಸ್ತುತ ಆರ್ಥಿಕ ಸಲಹೆಗಾರಾಗಿರುವ ಜಿ.ಪಿ.ರಘು, ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಆರ್ಥಿಕ ಸಲಹೆಗಾರರು (ಜಂಟಿ ನಿಯಂತ್ರಕರು) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆ ಅವಧಿಯಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಮತ್ತು ಇತರ ಸಾಮಗ್ರಿ ಖರೀದಿಸಿದ್ದು, ಜೊತೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಇಲಾಖಾ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಮತ್ತು ಇತರೆ ಸಾಮಗ್ರಿ ಖರೀದಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಕುರಿತಂತೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸಲಾಗಿತ್ತು.

ಡಿ. 27, 2023ರಂದು ನೀಡಿದ ತನಿಖಾ ವರದಿಯಲ್ಲಿ ಪಿಪಿಇ ಕಿಟ್ ಹಾಗೂ ಇತರೆ ಸಾಮಗ್ರಿ ಖರೀದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ KTPP ಕಾಯ್ದೆಯ ಉಲ್ಲಂಘನೆ, ಕರ್ತವ್ಯಲೋಪ ಹಾಗೂ ಕಾರ್ಯವಿಧಾನಗಳನ್ನು ಪಾಲಿಸದೆ ಇರುವುದು ಮೋಲ್ನೋಟಕ್ಕೆ ಕಂಡುಬಂದಿದೆ. ಈ ಉಲ್ಲಂಘನೆಗೆ ಕಾರಣರಾದ ಅಂದಿನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆರ್ಥಿಕ ಸಲಹೆಗಾರರು ಹಾಗೂ ಅರೋಗ್ಯ ಸಲಕರಣಾಧಿಕಾರಿಯ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯ ನೀಡಿತ್ತು.

ತನಿಖಾ ಸಮಿತಿಯ ತನಿಖಾ ವರದಿಯನ್ನು ಪರಿಶೀಲಿಸಿದಾಗ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಮತ್ತು ಇತರೆ ಸಾಮಗ್ರಿ ಖರೀದಿಸಿರುವುದು ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖಾ ವರದಿಯಿಂದ ಸ್ಪಷ್ಟವಾಗಿದೆ‌. ಜಿ.ವಿ.ರಘು ಅವರು ಈ ಪ್ರಕರಣ ನಡೆದ ಅವಧಿಯನ್ನು ಒಳಗೊಂಡಂತೆ 3.08.2021ರವರೆಗೆ ಆರ್ಥಿಕ ಸಲಹೆಗಾರಾಗಿ (ಜಂಟಿ ನಿಯಂತ್ರಕರು) ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದು ಅಕ್ರಮವೆಸಗಿರುವುದು ತನಿಖಾ ವರದಿ ಹಾಗೂ ದಾಖಲಾತಿಗಳಿಂದ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1997ರ ನಿಯಮಗಳ ಅನುಸಾರ ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಗುಡ್‌ನ್ಯೂಸ್‌! 34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸೂಚನೆ

ABOUT THE AUTHOR

...view details